ಸಾರಾಂಶ
ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ಹಂಚದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ, ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿಯಿಂದ ಗುರುವಾರ ಬೆಳಗ್ಗೆಯಿಂದಲೇ ವಿಮಾನ ನಿಲ್ದಾಣದ ಮುಖ್ಯಧ್ವಾರದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವಿಮಾನ ನಿಲ್ದಾಣಕ್ಕಾಗಿ ನಾವು ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆ ನಿವೇಶನ ನೀಡುವುದಾಗಿ ಸರ್ಕಾರದ ಆದೇಶವೂ ಆಗಿತ್ತು. ನ್ಯಾಯಾಲಯ ಕೂಡ ಅವರಿಗೆ ನಿವೇಶನ ನೀಡಿ ಎಂದು ಆದೇಶ ನೀಡಿತ್ತು. ನಮಗೆ ನಿವೇಶನವನ್ನು ವಿಮಾನ ನಿಲ್ದಾಣ ಉದ್ಘಾಟನೆಗೂ ಮೊದಲೇ ನೀಡಬೇಕಿತ್ತು ಆದರೆ ನೀಡಲಿಲ್ಲ, ಉದ್ಘಾಟನೆಯ ದಿನ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದನ್ನು ಕಂಡು ನಮಗೆ ಜಿಲ್ಲಾಡಳಿತ ನಿವೇಶನ ಹಂಚಿಕೆಯ ಪತ್ರವನ್ನೂ ನೀಡಿತ್ತು. ಆದರೆ ಅಲ್ಲಿ ನಿವೇಶನ ಹಂಚದಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ತಡೆಯಾಜ್ಞೆ ತಂದಿದ್ದರು ನಾವೇ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದೆವು ಎಂದು ತಿಳಿಸಿದರು. ಆದರೂ ಕೂಡ ನಮಗೆ ನಿವೇಶನ ಹಂಚಿಕೆ ಯಾಗಿಲ್ಲ. ಸಂತ್ರಸ್ತ ರೈತರಿಗೆ ಮೂರು ತಿಂಗಳ ಒಳಗೆ ನಿವೇಶನ ಹಂಚಿಕೆ ಮಾಡಲು ಸಂತ್ರಸ್ತರಾದ ನಮ್ಮಗಳ ಪರವಾಗಿ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಇಷ್ಟಾದರೂ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದ್ದು, ಇದೂವರೆಗೂ ನಮಗೆ ನಿವೇಶನ ಹಂಚಿಕೆ ಪತ್ರ ನೀಡಿಲ್ಲ ಎಂದು ದೂರಿದರು.ಸುಮಾರು 341 ಸಂತ್ರಸ್ತರಿದ್ದೇವೆ. ಈಗಾಗಲೇ ಕೆಎಚ್‍ಬಿ ಮೂಲಕ ನಿವೇಶನಗಳ ಸಿದ್ಧವಾಗಿವೆ. ಆದರೂ ಕೆಎಚ್‍ಬಿಗೆ ಸರ್ಕಾರದಿಂದ ಹಣಪಾವತಿಯಾಗಿಲ್ಲ ಎಂಬ ಕಾರಣದಿಂದ ಹಂಚಿಕೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲಾಡಳಿತದ ಈ ವಿಳಂಬ ನೀತಿಯನ್ನು ವಿರೋಧಿಸಿ ಇಂದಿನಿಂದ ನಮಗೆ ನ್ಯಾಯ ಸಿಗುವವರೆಗೂ ಅನಿರ್ದಿಷ್ಟ ಕಾಲಾವಧಿವರೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂಧನೆ ಕೇಸನ್ನು ಕೂಡ ದಾಖಲಿಸುತ್ತೇವೆ. ನಮ್ಮ ಕಾನೂನು ಮತ್ತು ಬೀದಿ ಹೋರಾಟ ಮುಂದುವರಿಯುತ್ತದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮಗೆ ಲಿಖಿತರೂಪದಲ್ಲಿ ಸೂಚನೆ ನೀಡುವವರೆಗೆ ನಾವು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ ಮಹಿಳೆಯರೂ ಸೇರಿದಂತೆ ರೈತರು ಮತ್ತು ಸಂತ್ರಸ್ತ ಕುಟುಂಬದವರು ಟ್ರ್ಯಾಕ್ಟರ್‌ಗಳೊಂದಿಗೆ ಧರಣಿ ಮುಂದುವರಿಸಿದ್ದಾರೆ. ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಮಹಾದೇವ, ಶಿವಾನಂದ, ರಾಮಣ್ಣ, ನಾಗರಾಜ್, ಎನ್.ಟಿ.ಕುಮಾರ್, ವೀರಭದ್ರ, ರಾಘವೇಂದ್ರ, ಬಸವಲಿಂಗಪ್ಪ, ರಾಮಣ್ಣ, ರಂಗಪ್ಪ, ಅಂಬಿಕಾ, ನಾಗರತ್ನಮ್ಮ, ಸಾವಿತ್ರಮ್ಮ ಸೇರಿದಂತೆ ಹಲವರಿದ್ದರು.