ಸಾರಾಂಶ
ಮುಂಡಗೋಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮೊದಲು ಅಂಬೇಡ್ಕರ್ ಹಾಗೂ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಆನಂತರ ಮೆರವಣಿಗೆ ಆರಂಭಿಸಿ ಶಿವಾಜಿ ಸರ್ಕಲ್‌ಗೆ ಆಗಮಿಸಿದ ಪ್ರತಿಭಟನೆಕಾರರು ರಸ್ತೆ ತಡೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳು ರಸ್ತೆ ತಡೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹಾಗಾಗಿ ರಸ್ತೆ ತಡೆ ನಡೆಸದಂತೆ ಮನವಿ ಮಾಡಿದರು. ಇದರಿಂದ ರಸ್ತೆ ತಡೆ ಮಾಡುವುದನ್ನು ಕೈಬಿಟ್ಟ ಪ್ರತಿಭಟನಾಕಾರರು, ಶಿವಾಜಿ ಸರ್ಕಲ್‌ನಲ್ಲಿಯೇ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಉದ್ಘಾಟನೆಗೊಂಡು ಒಂದು ವರ್ಷ ಕಳೆದರೂ ಬಸ್ ಸಂಚಾರ ಆರಂಭಿಸದ ಮುಂಡಗೋಡ ಬಸ್ ಡಿಪೋಗೆ ಈ ಕೂಡಲೇ ಅಗತ್ಯ ಬಸ್‌ಗಳನ್ನು ನೀಡಿ, ಕಾರ್ಯಾರಂಭ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರ ಬಿಲ್ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಅವರಿಗೆ ಸರ್ಕಾರಿ ಸೌಲಭ್ಯ ದೊರೆಯುವಂತಾಗಬೇಕು. ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ೫೩ ಹುದ್ದೆಗಳನ್ನು ಭರ್ತಿ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಆರು ವಿಧಾನಸಭೆ ಕ್ಷೇತ್ರದಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ದಲಿತರಿಗಾಗಿ ಮೀಸಲಿಡಬೇಕು. ಗೃಹರಕ್ಷಕ ದಳದವರಿಗೆ ವರ್ಷದಲ್ಲಿ ೩೬೫ ದಿನ ಕೆಲಸಗಳನ್ನು ಕೊಟ್ಟು ಸರ್ಕಾರದ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
೧೯೭೮ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜನರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಅರಣ್ಯ ಅತಿಕ್ರಮಣದಾರರಿಗೆ ಕೂಡಲೇ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಉತಾರ ನೀಡಬೇಕು. ರಾಜ್ಯ ರಾಜಕಾರಣಿಗಳ ಅಧಿಕಾರ ದುರುಪಯೋಗದಿಂದ ಯಾರೋ ಮಾಡಿರುವ ತಪ್ಪಿಗಾಗಿ ಪೊಲೀಸರ ಮೇಲೆ ಆಗುತ್ತಿರುವ ದಬ್ಬಾಳಿಕೆ ಸರಿಪಡಿಸಬೇಕು. ಮುಂಡಗೋಡ ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಸಮಸ್ಯೆ ಎದುರಿಸುತ್ತಿರುವ ಬಾಚಣಕಿ, ನ್ಯಾಸರ್ಗಿ ಮುಂತಾದ ಗ್ರಾಮದ ಭೂಮಿಯನ್ನು ಕೆಜೆಪಿ ಮಾಡಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ರೈತ ಸಂಘದ ರಾಜ್ಯ ಕಾನೂನು ಸಲಹೆಗಾರ ಅಮರೇಶ ಹರಿಜನ, ಮುಖಂಡರಾದ ಹನುಮಂತಪ್ಪ ಆರೆಗೊಪ್ಪ, ಭೀಮಸಿ ವಾಲ್ಮೀಕಿ, ಎಸ್.ಎಸ್. ಪಾಟೀಲ, ಗೋವಿಂದಪ್ಪ ಬೆಂಡ್ಲಗಟ್ಟಿ, ನೂರಅಹ್ಮದ ಮುಜಾವರ, ಸುಭಾಸ ವಡ್ಡರ, ಯಲ್ಲವ್ವ ಭೋವಿ, ಮಂಜುನಾಥ ಮೈಸೂರು, ದಯಾನಂದ ಕಳಸಾಪುರ, ಸಾವಿತ್ರಿ ಹರೀಶ, ಹನುಮಂತ ಭೋವಿವಡ್ಡರ, ರಾಜಮ್ಮ ರಾಮದುರ್ಗ, ಗಣಪತಿ ತಳವಾರ, ಶಿವಪ್ಪ ಭಜಂತ್ರಿ, ಶೋಭಾ ಮೆಣಸಿನಕಾಯಿ, ಅರ್ಜುನ ಕಿರವತ್ತಿ, ದುರ್ಗಪ್ಪ ಬಂಡಿವಡ್ಡರ, ಪರಶುರಾಮ ಬೆಳ್ಳೆನವರ್, ಪ್ರಭು, ಸುಭಾಸ ಮುಂತಾದವರಿದ್ದರು.