ಉಡುಪಿ ಪೂರ್ಣ ಪ್ರಜ್ಞ ಕಾಲೇಜು: ಸಂಸ್ಥಾಪಕರ ದಿನಾಚರಣೆ

| Published : Jul 04 2025, 11:46 PM IST / Updated: Jul 04 2025, 11:47 PM IST

ಸಾರಾಂಶ

ಉಡುಪಿ ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿಸಂಸ್ಥಾಪಕರ ದಿನಾಚರಣೆಯಲ್ಲಿ ಶ್ರೀ ವಿಬುಧೇಶ ತೀರ್ಥರನ್ನು ಸ್ಮರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪರಮಪೂಜ್ಯ ಶ್ರೀ ವಿಬುಧೇಶ ತೀರ್ಥರಿಗೆ ವಿಜ್ಞಾನ ಮತ್ತು ಇಂಗ್ಲಿಷಿನ ಬಗ್ಗೆ ಪ್ರೀತಿ ಇತ್ತು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಅವರು, ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ದೂರದೃಷ್ಟಿ, ಕರ್ತೃತ್ವ ಶಕ್ತಿ, ಅಧ್ಯಾಪಕರನ್ನು ಪ್ರತಿಭೆಯ ಆಧಾರದ ಮೇಲೆ ನೇಮಿಸುವುದರಿಂದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು ಬೆಳೆದು ನಿಂತಿದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಕೆ. ಸದಾಶಿವ ರಾವ್ ಹೇಳಿದ್ದಾರೆ.ನಗರದ ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಶ್ರೀ ವಿಬುಧೇಶ ತೀರ್ಥರನ್ನು ಸ್ಮರಿಸಿ ಅವರು ಮಾತನಾಡಿದರು.ಉದ್ಯಮಿ, ಪೂರ್ಣಪ್ರಜ್ಞ ಸಂಸ್ಥೆಯ ಹಳೆ ವಿದ್ಯಾರ್ಥಿ ನಂಜೇಶ್ ಬೆನ್ನೂರು ಮಾತನಾಡಿ, ನಮ್ಮ ಶ್ರಮಕ್ಕೆ ತಕ್ಕ ಫ಼ಲ ಸಿಕ್ಕಿಯೇ ಸಿಗುತ್ತದೆ. ಬೆಳಗ್ಗೆ ನೆಟ್ಟ ಗಿಡ ಸಾಯಂಕಾಲದೊಳಗೆ ಫಲ ನೀಡುವುದಿಲ್ಲ. ಸಂವಹನದಲ್ಲಿ ಆಂಗ್ಲ ಭಾಷೆಯ ಪ್ರಯೋಗ ವಿಬುಧೇಶ ತೀರ್ಥರ ಆಣತಿಯಂತೆ ಪೂರ್ಣಪ್ರಜ್ಞ ಶಾಲೆಯಲ್ಲಿ ಕಲಿತ ನಾನು ಅಳವಡಿಸಿಕೊಂಡಿದ್ದರಿಂದ ಇಂದು ರಾಷ್ಟ್ರೀಯ, ಜಾಗತಿಕ ಮಟ್ಟದಲ್ಲಿ ನನ್ನ ಸಂಸ್ಥೆಯನ್ನು ಬೆಳೆಸಲು ಸಾಧ್ಯವಾಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಎ. ಪಿ. ಭಟ್ ಮಾತನಾಡಿ, ಪೂಜ್ಯರಿಗೆ ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಪ್ರತಿಭಾ ಪಲಾಯನ ಆಗಬಾರದೆಂದು ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ದೇಶದ ಶ್ರೇಷ್ಠ ವಿಜ್ಞಾನಿಗಳನ್ನು ಉಡುಪಿಗೆ ಕರೆಯಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರಿಗೆ ವಿಜ್ಞಾನದ ಬಗೆಗೆ, ವಿಜ್ಞಾನಿಗಳ ಬಗೆಗೆ ಇರುವ ಒಲವು ಗೊತ್ತಾಗುತ್ತದೆ’ ಎಂದು ಹೇಳಿದರು.ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಪಿ.ಎಸ್.ಐತಾಳ್, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ ಹೊಳ್ಳ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಡಾ. ರಾಮು ಎಲ್., ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಕಾಂತ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಂತೋಷ್ ಕುಮಾರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮಾನಂದ ರಾವ್ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಿಕೆ ಶ್ರೀದೇವಿ ಬಾಳಿಗ ವಂದಿಸಿದರು.