ಸಾರಾಂಶ
ಹುಬ್ಬಳ್ಳಿ:
ಇಂದಿಗೂ ಅಲ್ಪಸಂಖ್ಯಾತರಲ್ಲಿ ಶಿಕ್ಷಣದ ಕೊರತೆಯಿದ್ದು ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆದ್ಯತೆ ನೀಡಬೇಕಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.ಅವರು ಇಲ್ಲಿನ ಸದಾಶಿವನಗರದ ಸರ್ಕಾರಿ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಕಾಲೇಜಿನಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹು-ಧಾ ಮಹಾನಗರ ಪಾಲಿಕೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸರ್ಕಾರಿ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಪಪೂ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ನಾನು ಶಾಸಕನಾಗಿ, ಸಚಿವನಾಗಿ ಅಷ್ಟೆಲ್ಲ ಅಧಿಕಾರ ಅನುಭವಿಸಿದರೂ ನನಗೂ ಒಂದು ಕೊರಗು ಕಾಡುತ್ತಿದೆ. ನನಗೆ ದೇವರು ಎಲ್ಲವನ್ನೂ ನೀಡಿದ. ಆದರೆ, ಶಿಕ್ಷಣ ನೀಡಲಿಲ್ಲ. ಇದನ್ನೆ ಮೆಲಕು ಹಾಕುತ್ತಾ ಕಣ್ಣೀರು ಹಾಕುತ್ತೇನೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ನಾನು ಸಚಿವನಾದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. 2024ರಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು 1300 ವಿದ್ಯಾರ್ಥಿಗಳಿಗೆ ₹5 ಲಕ್ಷ ಹಣಕಾಸಿನ ನೆರವು ನೀಡಲಾಗುತ್ತಿದೆ. ₹120 ಕೋಟಿ ವೆಚ್ಚದಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಹಜ್ ಭವನ ನಿರ್ಮಿಸಲಾಗಿದ್ದು, ಇದರಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನುಕೂಲವಾಗಿದೆ. ಉಳಿದ ದಿನಗಳಂದು ಹಜ್ ಭವನದಲ್ಲಿ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಕೋಚಿಂಗ್ ನೀಡಲಾಗುತ್ತಿದೆ. ಇದರ ಫಲನಾಗಿ ಕಳೆದ ಐಎಎಸ್, ಕೆಎಎಸ್ ಪರೀಕ್ಷೆಯಲ್ಲಿ 9 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದರು.ಬಿಜೆಪಿ-ಜೆಡಿಎಸ್‌ಗೆ ಜನರ ಕಾಳಜಿಯಿಲ್ಲ:
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಜನರ ಬಗ್ಗೆ ಕಾಳಜಿ ವಹಿಸಿಲ್ಲ. ಬರೀ ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುತ್ತಲೇ ಅಧಿಕಾರಕ್ಕೆ ಬಂದವರು. ಇವರಿಗೆ ದೇಶದ ಜನತೆ ಒಂದಾಗಿರುವುದು ಇಷ್ಟವಿಲ್ಲ. ನಮ್ಮ ಪೂರ್ವಜರು ನಮಗೆ ಕಲಿಸಿರುವುದೊಂದೇ "ಸಾರೆ ಜಹಾಂಸೆ ಅಚ್ಛಾ ಹಿಂದೂ ಸಿತಾಹಮಾರಾ " ಎಂದು. ಆದರೆ, ಬಿಜೆಪಿಯವರಿಗೆ ಇದೇ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.ಯಾರ ವಿಕಾಸ ತಿಳಿಸಲಿ:
ಕೇಂದ್ರ ಸರ್ಕಾರ ಬಡವರಿಗೆ ಮನೆ ನಿರ್ಮಾಣಕ್ಕೆ ಅನುದಾನ ನೀಡುತ್ತೆ. ಆದರೆ, ಜಿಎಸ್‌ಟಿ ರೂಪದಲ್ಲಿ ಮರಳಿ ಕಸಿದುಕೊಳ್ಳುತ್ತಿದ್ದಾರೆ. ಪ್ರಧಾನಿಗಳಿಗೆ ಬಡವರ ಮೇಲೆ ಕರುಣೆಯಿದ್ದರೆ ಮೊದಲು ಬಡವರಿಗೆ ಹಾಕುತ್ತಿರುವ ಜಿಎಸ್‌ಟಿ ನಿಲ್ಲಿಸಲಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿಗಳು ಯಾರೊಂದಿಗೆ ಸಾಥ್ ನೀಡುತ್ತಿದ್ದಾರೆ, ಯಾರ ವಿಕಾಸವಾಗಿದೆ ಎಂಬುದನ್ನು ತಿಳಿಸಲಿ ಎಂದು ವ್ಯಂಗ್ಯವಾಡಿದರು.ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯಲ್ಲಿ ನೂರಾರು ಅಮಾಯಕರು ಕೆಲವು ಪಟ್ಟಭದ್ರ ಹಿತಾಸಕ್ತಿಗೆ ಬಲಿಯಾಗಿ ಜೈಲು ಸೇರುವಂತಾಯಿತು. ಆಗ ಅವರ ನೆರವಿಗೆ ಬಂದಿದ್ದೇ ಸಚಿವ ಜಮೀರಅಹ್ಮದ್ ಅವರು ಎಂದು ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯನ್ನು ಮೆಲುಕು ಹಾಕಿದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗೋಪಾಲ ಲಮಾಣಿ, ಜಿಪಂ ಸಿಇಒ ಸ್ವರೂಪ ಟಿ.ಕೆ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಖಾಶಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಪಾಲಿಕೆ ಸದಸ್ಯರು, ಮುಖಂಡರಿದ್ದರು.ನಾನು ಕನ್ನಡಿಗ:
ಹಿಂದೆ ಅನಂತಕುಮಾರ ಹೆಗಡೆ ಅವರು ಕೇಂದ್ರ ಸಚಿವರಾದ ವೇಳೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂಬ ಹೇಳಿಕೆ ನೀಡಿದ್ದರು. ಹೀಗೆ ಬಿಜೆಪಿಯ ಅನೇಕ ನಾಯಕರು ಹೇಳಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೆ ನಾವೆಲ್ಲ ಈ ಸ್ಥಾನದಲ್ಲಿದ್ದೇವೆ ಎಂಬ ಅರಿವು ಅವರಿಗೆ ಬರಲಿ. ನಾನು ಮುಸ್ಲಿಂ ಆಗಿರಬಹುದು. ಆದರೆ, ನಾನು ಹಿಂದೂಸ್ತಾನಿ. ನನ್ನ ಮಾತೃಭಾಷೆ ಕನ್ನಡ. ಎಲ್ಲರೂ ಹೆಮ್ಮೆಯಿಂದ ಹೇಳಿ "ನಾನು ಕನ್ನಡಿಗ " ಎಂದು ಸಚಿವ ಜಮೀರಅಹ್ಮದ್ ಏರುಧ್ವನಿಯಲ್ಲಿ ಹೇಳಿದರು.