ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನನಂದ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಮಂಜುಳಾ ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
- ವಚನಾನಂದ ಶ್ರೀ ವಿರುದ್ಧದ ಕೇಸ್ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಮಂಜುಳಾ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನನಂದ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಮಂಜುಳಾ ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಮಂಜುಳಾ ಅವರನ್ನು ದಾವಣಗೆರೆ ಆಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಆದೇಶ ಕೈ ಸೇರುತ್ತಿದ್ದಂತೆ ಪಿಎಸ್ಐ ಮಂಜುಳಾ ಆಜಾದ್ ನಗರ ಠಾಣೆಯಲ್ಲಿ ಚಾರ್ಜ್ ಸಹ ವಹಿಸಿಕೊಂಡಿದ್ದಾರೆ.
ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ಮಂಜುಳಾ ವರ್ಗಾವಣೆಗೆ ಆಡಳಿತಾತ್ಮಕ ಕಾರಣ ನೀಡಿ, ದಾವಣಗೆರೆ ಆಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.- - -
(ಬಾಕ್ಸ್-1)* ಈ ಹಿಂದೆಯೇ ವರ್ಗಾವಣೆಗೆ ಮನವಿ ಮಾಡಿದ್ದ ಪಿಎಸ್ಐ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಮಂಜುಳಾ ಈ ಹಿಂದೆಯೇ ದಾವಣಗೆರೆ ನಗರದ ಯಾವುದಾದರೂ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವಂತೆ ಪೂರ್ವ ವಲಯ ಐಜಿಪಿ ಅವರಿಗೆ ಲಿಖಿತ ಮನವಿ ಮಾಡಿದ್ದರು. ನಿತ್ಯವೂ ದಾವಣಗೆರೆಯಿಂದ ಹರಿಹರಕ್ಕೆ ಹೋಗಿ, ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆಂಬ ಕಾರಣವೊಡ್ಡಿ, ವರ್ಗಾವಣೆಗೆ ಮನವಿ ಮಾಡಿದ್ದರು ಎನ್ನಲಾಗಿದೆ.
- - -(ಬಾಕ್ಸ್-2)
* ಯಾರ ಹಸ್ತಕ್ಷೇಪವೂ ಇಲ್ಲ: ಜಿಲ್ಲಾ ಎಸ್‌ಪಿ ಹರಿಹರ ಗ್ರಾಮಾಂತರ ಪಿಎಸ್ಐ ಮಂಜುಳಾ ಮನವಿ ಮೇರೆಗೆ, ಐಜಿಪಿ ಅವರ ಸೂಚನೆಯಂತೆ ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆಯೇ ಮಗಳ ವಿದ್ಯಾಭ್ಯಾಸದ ಕಾರಣಕ್ಕೆ ಪಿಎಸ್ಐ ಮಂಜುಳಾ ದಾವಣಗೆರೆ ಜಿಲ್ಲಾ ಕೇಂದ್ರದ ಠಾಣೆಗಳಿಗೆ ವರ್ಗಾವಣೆಗೆ ಕೋರಿದ್ದರು. ಅಲ್ಲದೇ, ಸ್ವಾಮೀಜಿ ವಿರುದ್ಧದ ಪ್ರಕರಣದ ತನಿಖೆಗೆ ತಾವು ಬೇಡ ಎಂದು ಸಹ ಮನವಿ ಮಾಡಿದ್ದರು. ಹಾಗಾಗಿ, ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ಯಾವುದೇ, ಯಾರದ್ದೇ ಹಸ್ತಕ್ಷೇಪವೂ ಇಲ್ಲ. ಪಿಎಸ್ಐ ಮನವಿ ಮೇರೆಗೆ ಆದ ವರ್ಗಾವಣೆ ಇದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ್ ಸ್ಪಷ್ಟಪಡಿಸಿದ್ದಾರೆ.- - -
