ಗೋಕರ್ಣದಲ್ಲಿ ಜನಜಾತ್ರೆ, ಎಲ್ಲೆಡೆ ಟ್ರಾಫಿಕ್ ಜಾಮ್

| Published : Dec 28 2024, 01:00 AM IST

ಸಾರಾಂಶ

ಹೊಸವರ್ಷಾಚರಣೆಯ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಶುಕ್ರವಾರ ಮಾದನಗೇರಿಯಿಂದ ಗೋಕರ್ಣದ ವರೆಗೆ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ನಿಲುಗಡೆಗೂ ತೀವ್ರ ಸಮಸ್ಯೆಯಾಗುತ್ತಿದೆ.

ಗೋಕರ್ಣ: ಪ್ರವಾಸಿ ತಾಣದಲ್ಲಿ ಪ್ರವಾಸಿ ವಾಹನಗಳ ನಿಲುಗಡೆ ಸವಾಲಾಗಿ ಪರಿಣಮಿಸಿದ್ದು, ಇದರ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಡಕಾಗುತ್ತಿದೆ.

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಶುಕ್ರವಾರ ಮಾದನಗೇರಿಯಿಂದ ಗೋಕರ್ಣದ ವರೆಗೆ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಅಂತೂ ಇಂತೂ ಇಲ್ಲಿಗೆ ಬಂದರೆ ಇಲ್ಲಿಯೂ ಅದೇ ಕಥೆ! ಮೇಲಿನಕೇರಿಯಿಂದ ರಥಬೀದಿ ವರೆಗಿನ ಒಂದೂವರೆ ಕಿ.ಮೀ. ದೂರ ಕ್ರಮಿಸಲು ಒಂದು ಗಂಟೆ ಹಿಡಿಯುತ್ತಿದೆ.

ಹೀಗೆ ಯಾವ ದಿಕ್ಕಿನಲ್ಲಿ ಹೋದರೂ ಮಹಾನಗರದಂತೆ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.

ಸಮಸ್ಯೆ ಏನು? ಏನಾಗಬೇಕು?: ಮೇಲಿನಕೇರಿಯಿಂದ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ರಸ್ತೆಯನ್ನು ಆಕ್ರಮಿಸಿರುವ ಅಂಗಡಿ ಮುಂಗಟ್ಟನ್ನು ತೆರವುಗೊಳಿಸಿ ವಾಹನ ಸಂಚರಿಸುವಾಗ ಪಾದಚಾರಿಗಳಾದರೂ ಸಾಗಲು ಅನುವಾಗುವಂತೆ ಮಾಡಬೇಕಿದೆ. ಇನ್ನೂ ಹೆಚ್ಚಿನ ಜನರು ಬರುವ ವೇಳೆ ಸ್ಥಳೀಯ ಆಡಳಿತ ಅಥವಾ ಜಿಲ್ಲಾಡಳಿತವರು ಹೆಚ್ಚಿನ ಪೊಲೀಸ್ ಅಥವಾ ಹೋಮ್ ಗಾರ್ಡ್‌ ನಿಯೋಜನೆಗೊಳಿಸಿ ಮೇಲಿನಕೇರಿಯಿಂದ ಬಂಗ್ಲೆಗುಡ್ಡಕ್ಕೆ ಪ್ರವಾಸಿ ವಾಹನ ಕಳುಹಿಸಿ, ಅಲ್ಲಿ ನಿಲುಗಡೆಗೊಳಿಸುವ ವ್ಯವಸ್ಥೆ ನಿರಂತರವಾಗಿ ಮಾಡಬೇಕಿದೆ.

ಶುಕ್ರವಾರ ಪೊಲೀಸರು ಇದೇ ಕ್ರಮ ಕೈಗೊಂಡ ಕಾರಣ ಸಂಜೆ ವೇಳೆ ತುಸು ನಿಯಂತ್ರಣಕ್ಕೆ ಬಂದಿತ್ತು. ಇನ್ನು ಜಾತ್ರಾ ಅವಧಿಯಲ್ಲಿ ಪಡೆದಂತೆ ಭದ್ರಕಾಳಿ ಕಾಲೇಜು ಮೈದಾನ ಅಥವಾ ಇನ್ನಿತರ ಖಾಸಗಿ ಜಾಗ ಪಡೆದು ವಾಹನ ನಿಲುಗಡೆಗೆ ಅವಕಾಶ ನೀಡಿ, ಪೇಟೆಯಲ್ಲಿ ಜನರು ನಡೆದುಕೊಂಡು ಹೋಗುವಂತೆ ಮಾಡಬೇಕಿದೆ. ಏಕಮುಖ ಸಂಚಾರ ನಿಯಮ ಪಾಲನೆಗೆ ಸರಿಯಾದ ಮಾರ್ಗಸೂಚಕ ಫಲಕ ಅಳವಡಿಸಬೇಕಿದೆ.

ಇಲ್ಲಿನ ಬಹುತೇಕ ವಸತಿ ಗೃಹದಲ್ಲಿ ವಾಹನ ನಿಲುಗಡೆ ಸ್ಥಳಾವಕಾಶವೇ ಇಲ್ಲ. ಇದರಿಂದ ವಸತಿಗೆ ಬಂದವರು ರಸ್ತೆಯಲ್ಲಿ ವಾಹನ ನಿಲ್ಲಿಸುತ್ತಿದ್ದು, ಈ ವಾಹನಗಳಿಗೆ ಬೇರೆಡೆ ನಿಲುಗಡೆಗೊಳಿಸಲು ಸೂಚಿಸಬೇಕಿದೆ.

ಅದರಲ್ಲಿಯೋ ಇಲ್ಲಿನ ವೆಂಕಟ್ರಮಣ ದೇವಾಲಯದಿಂದ ಆಡುಕಟ್ಟೆ ಶಾಲೆಯ ಮಾರ್ಗದಲ್ಲಿ ಏಕಮುಖ ಸಂಚಾರ ನಿಯಮ ಮುರಿದು ವಾಹನಗಳ ಸಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸಿಬ್ಬಂದಿ ನಿಯೋಜನೆ ಅಥವಾ ಮಾಹಿತಿ ಫಲಕ ಅಳವಡಿಸಬೇಕಿದೆ. ಅದರಂತೆ ರಥಬೀದಿಯಿಂದ ಬಸ್ ನಿಲ್ದಾಣ ಸಾಗುವ ಮಾರ್ಗದಲ್ಲಿ ಸಹ ಸಂಚಾರ ನಿಯಮ ಪಾಲನೆ ಕಡ್ಡಾಯಗೊಳಿಸಬೇಕಿದೆ. ಈ ಸಮಸ್ಯೆ ಪ್ರತಿ ಬಾರಿ ಪುನಾವರ್ತನೆಯಾಗುತ್ತಿದ್ದು, ಈ ಬಗ್ಗೆ ಗ್ರಾಮ ಸಭೆ, ಜನಪ್ರತಿನಿಧಿಗಳ ಬಳಿ ಜನರು ನಿರಂತರವಾಗಿ ವಿವರಿಸುತ್ತಿದ್ದರೂ ಯಾವುದೇ ಕ್ರಮತೆಗೆದುಕೊಳ್ಳದಿರುವುದು ಪ್ರಸ್ತುತ ನಡೆಯುತ್ತಿರುವ ಆವಾಂತರಕ್ಕೆ ಕಾರಣವಾಗಿದೆ.

ಅಗಲೀಕರಣ ಅವಶ್ಯವೇ?: ಮಾದನಗೇರಿಯಿಂದ ಗೋಕರ್ಣ ಮಾರ್ಗ ಅಗಲೀಕರಣವಾಗಬೇಕು ಎಂದು ಬಹುತೇಕ ಜನರು ಆಗ್ರಹಿಸುತ್ತಿದ್ದಾರೆ. ಇದರಂತೆ ಗೋಕರ್ಣ ಮುಖ್ಯಮಾರ್ಗದ ಕೆಲವು ಕಡೆ ಅಗಲೀಕರಣ ಅಗತ್ಯವಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಅಂಚಿನ ಸಣ್ಣ ಜಾಗದಲ್ಲಿರುವ ನಿವಾಸಿಗಳು ಏಕಮುಖ ಸಂಚಾರವನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎನ್ನುತ್ತಿದ್ದಾರೆ. ಆದರೆ ಜನರು ಮಾತ್ರ ನಿತ್ಯ ಸಂಚಾರಕ್ಕೆ ಸಂಚರಿಸಲು ಪರದಾಡುತ್ತಿದ್ದಾರೆ.