ಸಾರಾಂಶ
ಗಜೇಂದ್ರಗಡ: ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾಗದಂತೆ ಸಮರ್ಥ ಆಡಳಿತ ನಡೆಸಿ ಜನತೆಗೆ ಶಿಕ್ಷಣದ ಹಕ್ಕು, ನರೇಗಾ ಯೋಜನೆ ಜಾರಿಗೊಳಿಸಿದ ಮನಮೋಹನ್ ಸಿಂಗ್ ಕಪ್ಪುಚುಕ್ಕೆ ರಹಿತ ಅಡಳಿತ ನಡೆಸಿದ ಅಗ್ರಗಣ್ಯರಲ್ಲಿ ಒಬ್ಬರು ಎಂದು ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಶುಕ್ರವಾರ ಕಾಲಕಾಲೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ದೇಶದ ಪ್ರಧಾನಿಯಾಗಿ ೨ಬಾರಿ ಆಡಳಿತ ನಡೆಸಿದ ಮನಮೋಹನ ಸಿಂಗ್ ಅವರು ಅಧಿಕಾರದಲ್ಲಿನ ಪ್ರತಿದಿನವು ದೇಶದ ಅಭಿವೃದ್ಧಿ ಜತೆಗೆ ಜನತೆಯನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ ಜಾರಿಗೆ ತಂದವರು. ದೇಶದಲ್ಲಿ ನರೇಗಾ ಮೂಲಕ ಉದ್ಯೋಗ ಸೃಷ್ಠಿ ಹಾಗೂ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎನ್ನುವ ಕಾಯ್ದೆ ತಂದ ಕೀರ್ತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಅಮೇರಿಕಾದಂತಹ ದೈತ್ಯ ದೇಶದಲ್ಲಿ ಆರ್ಥಿಕ ಕುಸಿತ ಉಂಟಾದಾಗ ಭಾರತ ಆರ್ಥಿಕ ನಷ್ಟವಾಗದಂತೆ ಮನಮೋಹನ್ ಸಿಂಗ್ ಅವರು ಕೈಗೊಂಡ ಕ್ರಮ ಕಂಡ ವಿದೇಶಗಳು ಮನಮೋಹನ್ ಸಿಂಗ್ ಅವರನ್ನು ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರು ಎಂದು ಮೆಚ್ಚುಗೆಗೆ ವ್ಯಕ್ತಪಡಿಸಿದ್ದವು. ಅಭಿವೃದ್ಧಿ ಹರಿಕಾರ ಹಾಗೂ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅಗಲಿಕೆ ದೇಶಕ್ಕೆ ದೊಡ್ಡ ನಷ್ಟ ಎಂದರು.
ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಜ್ಞಾನ ಹಾಗೂ ಮೌನದಿಂದಲೇ ತಮ್ಮ ಜವಾಬ್ದಾರಿ ನಿರ್ವಹಿಸಿದ್ದರು. ದೇಶದ ಭದ್ರತೆಗಾಗಿ ಪರಮಾಣು ಒಪ್ಪಂದ ಮಾಡಿಕೊಂಡ ದಿಟ್ಟ ನಿರ್ಧಾರ ಒಂದೆಡೆಯಾದರೆ ದೇಶದಲ್ಲಿನ ಸಮಸ್ಯೆಗಳಿಗೆ ಕೈಗೊಂಡ ಪರಿಹಾರಗಳ ಬಗ್ಗೆ ಮತ್ತು ಸರ್ಕಾರದ ಯೋಜನೆ ಸಮರ್ಥವಾಗಿ ಸಂಸತ್‌ನಲ್ಲಿ ಮಂಡಿಸುವುದರ ಜತೆಗೆ ವಿಪಕ್ಷಗಳು ಮತ್ತು ಮಾಧ್ಯಮಗಳ ಟೀಕೆಗಳನ್ನು ಸ್ವಾಗತಿ ನಿರ್ಭಯವಾಗಿ ಎದುರಿಸಿ ಸ್ಪಷ್ಟ ಹಾಗೂ ಸಮರ್ಪಕ ಉತ್ತರ ನೀಡುತ್ತಿದ್ದರು. ಮನಮೋಹನ್ ಸಿಂಗ್ ಅಗಲಿಕೆ ಕಾಂಗ್ರೆಸ್ ಹಾಗೂ ದೇಶಕ್ಕೆ ತೀವ್ರ ನೋವನ್ನು ತಂದಿದೆ ಎಂದರು.ಮುಖಂಡರಾದ ಎ.ಡಿ. ಕೋಲಕಾರ, ಉಮೇಶ ರಾಠೋಡ ಮಾತನಾಡಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸದಸ್ಯರಾದ ಮುರ್ತುಜಾ ಡಾಲಾಯತ, ವೆಂಕಟೇಶ ಮುಗದಲ್, ರಫೀಕ್ ತೋರಗಲ್ ಹಾಗೂ ಮಲ್ಲಿಕಾರ್ಜುನ ಗಾರಗಿ, ಹಸನ ತಟಗಾರ, ಅರಿಹಂತ ಬಾಗಮಾರ, ನಾಸಿರಅಲಿ ಸುರಪುರ, ಸಿದ್ದು ಗೊಂಗಡಶೆಟ್ಟಿಮಠ, ಗುಲಾಂ ಹುನಗುಂದ ಪ್ರಕಾಶ ರಾಠೋಡ ಸೇರಿದಂತೆ ಇತರರು ಇದ್ದರು.