ಅವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧ

| Published : May 04 2024, 12:38 AM IST

ಅವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಮೂರನೆ ವಾರ್ಡಿನಲ್ಲಿರುವ ರಸ್ತೆಗಳಿಗೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ತಾಂತ್ರ್ರಿಕವಾಗಿ ಪರಿಶೀಲನೆ ಮಾಡಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು

ಪಟ್ಟಣದ ಮೂರನೆ ವಾರ್ಡಿನಲ್ಲಿರುವ ರಸ್ತೆಗಳಿಗೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ತಾಂತ್ರ್ರಿಕವಾಗಿ ಪರಿಶೀಲನೆ ಮಾಡಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಆಲೂರು-ಬಿಕ್ಕೋಡು ರಸ್ತೆ ಬದಿಯಲ್ಲಿ ಮರಸು ಸರ್ವೆ ನಂಬರಿಗೆ ಸೇರಿದ ಅನ್ಯಸಂಕ್ರಮಣ ಮಾಡಿದ ಜಾಗದಲ್ಲಿ ನಿರ್ಮಾಣ ಮಾಡಿರುವ ಮನೆಗಳಿಗೆ ರಸ್ತೆಗಳಿದ್ದರೂ ಈವರೆಗೆ ಚರಂಡಿ ಮಾಡಿಲ್ಲ. ಕೆಲವೆಡೆ ನಿರ್ಮಾಣ ಮಾಡಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು ನೀರು ಹರಿಯದೆ ಅಲ್ಲಲ್ಲಿ ನಿಲ್ಲುತ್ತಿರುವುದರಿಂದ ಕೊಳಚೆ ನಿರ್ಮಾಣವಾಗಿ ರೋಗಗಳ ಕೇಂದ್ರ ಸ್ಥಾನವಾಗಿದೆ. ಅಲ್ಲಿ ನೆಲೆಸಿರುವ ನಿವಾಸಿಗಳಿಗೆ ಹಗಲು ವೇಳೆಯಲ್ಲೂ ಸೊಳ್ಳೆಗಳು ಕಚ್ಚುತ್ತಿರುವುದರಿಂದ ರೋಗಗ್ರಸ್ತ ತಾಣವಾಗಿದೆ. ನಿಯಮಾನುಸಾರವಾಗಿ ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲಾ ತೆರಿಗೆ ಪಾವತಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ, ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ಗಮನ ಹರಿಸಬೇಕು ಎಂಬುದು ಸ್ಥಳೀಯರ ಆಗ್ರಹ.ಕೆಲ ರಸ್ತೆಗಳಿಗೆ ಚರಂಡಿ ನಿರ್ಮಾಣ ಮಾಡುವಾಗ ಎದುರು ಇರುವ ರಸ್ತೆಗೆ ಮೋರಿ ನಿರ್ಮಾಣ ಮಾಡದೆ ಜನಸಾಮಾನ್ಯರು, ವಾಹನಗಳು ರಸ್ತೆ ದಾಟಲು ತೊಂದರೆಯಾಗಿದೆ. ಕೆಲ ರಸ್ತೆಗಳಲ್ಲಿ ಮನೆಗಳಿಂದ ಹೊರಸೂಸುವ ತ್ಯಾಜ್ಯ ನೀರು ಸಂಗ್ರಹವಾಗಿ ಸೊಳ್ಳೆಗಳ ತಾಣವಾಗಿದೆ. ಚರಂಡಿ ನಿರ್ಮಾಣ ಮಾಡುವ ಮೊದಲು ತಾಂತ್ರಿಕವಾಗಿ ಪರಿಶೀಲನೆ ನಡೆಸಿ, ನೀರು ಸರಾಗವಾಗಿ ಹರಿಯುವಂತೆ ಚರಂಡಿ ಮತ್ತು ಮೋರಿಗಳನ್ನು ನಿರ್ಮಾಣ ಮಾಡಬೇಕು ಎಂದು ನಿವಾಸಿ ನ್ಯಾಯಾಲಯ ಸಿಬ್ಬಂದಿ ಮೋಹನ್ ಆಗ್ರಹಿಸಿದ್ದಾರೆ.ಚರಂಡಿ ನಿರ್ಮಾಣ ಮಾಡುವ ಭೂಮಿಯನ್ನು ತಾಂತ್ರಿಕವಾಗಿ ಪರಿಶೀಲಿಸಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುವಂತೆ ಚರಂಡಿ ನಿರ್ಮಾಣ ಮಾಡಲಾಗುವುದು. ತಾಂತ್ರಿಕತೆ ಇಲ್ಲದ ಕಾರಣ ಸದ್ಯ ಕೆಲಸ ನಿಲ್ಲಿಸಲಾಗಿದೆ. ಸಂಪರ್ಕ ರಸ್ತೆಗೆ ಮೋರಿ ನಿರ್ಮಾಣ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ೧೪ ನೆ ಹಣಕಾಸು ಯೋಜನೆಯಲ್ಲಿ ಕಾಮಗಾರಿಗಳನ್ನು ಸೇರಿಸಿ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಇಂಜಿನಿಯರ್ ಕವಿತಾ ತಿಳಿಸಿದ್ದಾರೆ.