ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ದೊರೆಯಬೇಕೆಂಬ ಆಗ್ರಹ ಮತ್ತಷ್ಟು ಬಲ ಪಡೆದುಕೊಂಡಿದೆ. ವಿವಿಧ ಸಮುದಾಯಗಳು ಹಾಗೂ ಅಭಿಮಾನಿಗಳು ದೇವರ ಮೊರೆ ಹೋಗುತ್ತಿರುವ ಬೆನ್ನಲ್ಲೇ, ಕುಂಚಿಟಿಗ ಸಮಾಜದ ಮುಖಂಡರು ತಾಲ್ಲೂಕಿನ ಐತಿಹಾಸಿಕ ಬಿಳಿಕಲ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ದೊರೆಯುವಂತೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್‌ ಗೀಜಿಹಳ್ಳಿ, ಕಳೆದ ಹಲವು ದಿನಗಳಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ವಿವಿಧ ಸಮಾಜಗಳ ಮುಖಂಡರು ಜಾತ್ಯತೀತವಾಗಿ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತಿದ್ದು, ಹಲವು ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳು ನಡೆಯುತ್ತಿರುವುದು ಅವರ ಮೇಲಿನ ಜನರ ವಿಶ್ವಾಸ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾಗಿರುವ ಕೆ.ಎಂ. ಶಿವಲಿಂಗೇಗೌಡರು ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಭರವಸೆಯಂತೆ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ತಿಳಿಸಿದರು.

ರಾಜ್ಯ ನಾಯಕರು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದು, ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಘೋಷಣೆಯಾಗುವ ನಿರೀಕ್ಷೆ ಇದೆ. ಅವರ ಸಚಿವ ಸ್ಥಾನದ ಮಾರ್ಗದಲ್ಲಿರುವ ಎಲ್ಲ ಅಡೆತಡೆಗಳು ನಿವಾರಣೆಯಾಗಲಿ ಹಾಗೂ ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಗೆ ಅವರು ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ದೊರೆಯಲಿ ಎಂಬ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಧರ್ಮಶೇಖರ್‌ ಗೀಜಿಹಳ್ಳಿ ಹೇಳಿದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ಪಿ. ಮಾಯಣ್ಣ, ಮುಖಂಡರಾದ ವಿರೂಪಾಕ್ಷಪ್ಪ, ವಾಗೀಶ್, ಗುತ್ತಿಗೆದಾರ ಜಯಪ್ಪ, ಹೊನ್ನಕಟ್ಟ ಚಂದ್ರಣ್ಣ, ಗೀಜಿಹಳ್ಳಿ ರವಿ ಸೇರಿದಂತೆ ಕುಂಚಿಟಿಗ ಸಮಾಜದ ಹಲವು ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.