ಮಂಗಳೂರು: ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ಪುಸ್ತಕ ಹಬ್ಬ-2026ನ್ನು ಆ.16ರಿಂದ 18ರವರೆಗೆ ನಗರದ ಸಂಘನಿಕೇತನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಸಹ ಕಾರ್ಯದರ್ಶಿ ಲತೇಶ್ ಪಾತ್ರಬೈಲು ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 16ರಂದು ಬೆಳಗ್ಗೆ 10ಕ್ಕೆ ಖ್ಯಾತ ಲೇಖಕ, ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಉದ್ಘಾಟಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿಶ್ವವಿದ್ಯಾಲಯದ ಕಲಾ ನಿಕಾಯ ಡೀನ್ ಪ್ರೊ.ಸೋಮಣ್ಣ ಹೊಂಗಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.ಬೆಳಗ್ಗೆ 11.45ಕ್ಕೆ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2ರಿಂದ ವಿದ್ವಾನ್ ಮಹೇಶ್ ಪದ್ಯಾಣ ಬಳಗದಿಂದ ಶಾಸ್ತ್ರೀಯ ಸುಗಮ ಸಂಗೀತ, ಸಂಜೆ 3.30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಸಂಜೆ 5.30ರಿಂದ ಎಸ್.ಡಿ.ಎಂ. ರಂಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಬೇಂದ್ರ ಅಂದ್ರೆ’ ನಾಟಕ ಪ್ರದರ್ಶನ ನಡೆಯಲಿದೆ ಎಂದರು.17ರಂದು ಬೆಳಗ್ಗೆ 10ರಿಂದ ಕಲಾಭಿ ಥಿಯೇಟರ್ ಎಕ್ಸ್‌ಪ್ರೆಸ್ ಪ್ರಸ್ತುತಿಯಲ್ಲಿ ಅಜ್ಜಿ ಕಥೆಗಳು, ಮಧ್ಯಾಹ್ನ 2ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಧೂರ ಸಂಗ್ರಾಮ ಯಕ್ಷಗಾನ ಪ್ರದರ್ಶನ, ಸಂಜೆ 5ರಿಂದ ನಾಡಿನ ಖ್ಯಾತ ಅರ್ಥಧಾರಿಗಳಿಂದ ‘ಶ್ರವಣ ಭಕ್ತ ಪರೀಕ್ಷಿತ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
18ರಂದು ಬೆಳಗ್ಗೆ 10.30ರಿಂದ ಡಾ.ಪಾದೇಕಲ್ಲು ವಿಷ್ಣು ಭಟ್ಟರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಕಥನ ವಿಚಾರಗೋಷ್ಠಿ ನಡೆಯಲಿದ್ದು, ಭಾರತೀಯ ಮಹಾಕಾವ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಬಗ್ಗೆ ಡಾ.ವೀಣಾ ಬನ್ನಂಜೆ, ಪ್ರಾಚೀನ ತುಳು ಕಾವ್ಯ ಪರಂಪರೆ ಮತ್ತು ಆಧುನಿಕ ತುಳು ಸಾಹಿತ್ಯ ಕುರಿತು ಶ್ರೀಕಾಂತ್ ಶೆಟ್ಟಿ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2ರಿಂದ ‘ಮೊಬೈಲ್ ಯುಗದಲ್ಲಿ ಪುಸ್ತಕ’ ಬಗ್ಗೆ ವಿದ್ಯಾರ್ಥಿ ಗೋಷ್ಠಿ ನಡೆಯಲಿದೆ. ವಿಜೇತ್ ಶೆಟ್ಟಿ ಮಂಜನಾಡಿ, ಪೂರ್ಣಿಮಾ ಕೆ.ಎಂ., ಧಾರಿಣಿ ಎಸ್.ಕುಲಕರ್ಣಿ, ರಂಗನಾಥ ಚಿತ್ರದುರ್ಗ ವಿಚಾರ ಮಂಡಿಸಲಿದ್ದು, ವಿಕಾಸ್‌ರಾಜ್ ಪೆರುವಾಯಿ ಸಮನ್ವಯಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6 ರಿಂದ ಕಲಾಭಿ ಥಿಯೇಟರ್ ಪ್ರಸ್ತುತಿಯಲ್ಲಿ ‘ಮಾರಿ ಕಾಡು’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.ಈ ಪುಸ್ತಕ ಹಬ್ಬದಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾತ್ರವಲ್ಲದೆ ರಾಜ್ಯದ ಪ್ರಸಿದ್ಧ ಕವಿಗಳು ಮತ್ತು ಖ್ಯಾತ ಬರಹಗಾರರನ್ನು ಭೇಟಿ ಮಾಡುವ ಅವಕಾಶ ಲಭಿಸಲಿದೆ. ಜೊತೆಗೆ ಮಕ್ಕಳಿಗೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸಲಾಗಿದೆ. ಪ್ರತೀ ದಿನ ಸುಮಾರು 2,500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಾಹಿತ್ಯ ಕೇಂದ್ರದ ಟ್ರಸ್ಟಿಗಳಾದ ಪ್ರಕಾಶ್ ಪಿ.ಎಸ್., ಅರವಿಂದ ಬಿಜೂರು, ಮೆನೇಜರ್ ರತ್ನಾಕರ ಕುಳಾಯಿ, ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಗಜಾನನ ಪೈ ಇದ್ದರು.