ಪುತ್ತೂರು: ನಮ್ಮ ಸುತ್ತಲಿನ ಪರಿಸರ ಸಂರಕ್ಷಿಸುವ ಪ್ರತಿಜ್ಞೆ ಕೈಗೊಳ್ಳುವ ಕಾರ್ಯ ಪ್ರತಿ ಘಟಿಕೋತ್ಸವಗಳಲ್ಲಿ ಆಗಬೇಕು. ನಮ್ಮ ವಾತಾವರಣ ಒಳ್ಳೆಯದಾಗಿದ್ದರೆ ಮಾತ್ರ ಮಿಕ್ಕುಳಿದ ವಿಷಯಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ ಹೇಳಿದರು.

ಅವರು ಮಂಗಳವಾರ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಸೋಮವಾರ ನಡೆದ ೨೦೨೩-೨೦೨೪ ಹಾಗೂ ೨೦೨೪-೨೫ನೇ ಶೈಕ್ಷಣಿಕ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಸಪ್ತಪರ್ಣೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಪಠ್ಯವಿಷಯಗಳ ಜೊತೆಗೆ ಅವುಗಳಿಗಿಂತ ಭಿನ್ನವಾದ ಸಾಮಾಜಿಕ ಮೌಲ್ಯಗಳ ಅರಿವಿನ ಅಗತ್ಯ ಕೂಡಾ ಇದೆ. ಈ ಕಾಲಘಟ್ಟದಲ್ಲಿ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದ್ದು ಅಗತ್ಯ. ಈ ಸಪ್ತಪರ್ಣೋತ್ಸವದ ಕಾರಣದಿಂದ ಮೌಲ್ಯಗಳ ಉಳಿವು ಆಗಬೇಕು ಎಂದು ಧರ್ಮ ಹೇಳಿದರು.

ಜೀವನ ಮೌಲ್ಯ ಗುರಿ: ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್ , ಪದವಿ ಪಡೆದ ತಕ್ಷಣ ಕಲಿಕೆ ಅಂತ್ಯವೆಂದಲ್ಲ. ಬದುಕಿನುದ್ದಕ್ಕೂ ನಾವು ಹೊಸತನ್ನು ಕಲಿಯುತ್ತಲೇ ಇರಬೇಕು ಎಂದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಶುಭಾಶಂಸನೆಗೈದರು. ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಆಶಯದ ನುಡಿಗಳನ್ನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ ಹಾಗೂ ಕಾಲೇಜಿನ ಪರಿಕ್ಷಾಂಗ ವಿಭಾಗದ ಕುಲಸಚಿವ ಡಾ. ಎಚ್.ಜಿ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.

೨೦೨೩-೨೪ ಹಾಗೂ ೨೦೨೪-೨೫ನೇ ಶೈಕ್ಷಣಿಕ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಾಗೂ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನೂ ನೀಡಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಎಚ್.ಜಿ ಶ್ರೀಧರ್ ವಂದಿಸಿದರು. ಕಾಲೇಜಿನ ಆಡಳಿತ ವಿಭಾಗದ ವಿಶೇಷಾಧಿಕಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ. ಬಿ ನಿರ್ವಹಿಸಿದರು. ರ್‍ಯಾಂಕ್‌ ವಿಜೇತರು: ಕಲಾ ವಿಭಾಗದಲ್ಲಿ ವೈಷ್ಣವಿ ಶೆಟ್ಟಿ (೯೮.೬೨ ಶೇ.) ಪ್ರಥಮ ರ‍್ಯಾಂಕ್, ಬಿಎಸ್ಸಿ ವಿಭಾಗದಲ್ಲಿ ಧನ್ಯಶ್ರೀ ಸಿ.ಡಿ (೯೬.೧೭ಶೇ.) ಪ್ರಥಮ ರ್‍ಯಾಂಕ್‌, ಬಿಬಿಎ ವಿಭಾಗದಲ್ಲಿ ತನಿಷಾ ಬಿ( ೯೩.೩೭ ಶೇ.) ಪ್ರಥಮರ್‍ಯಾಂಕ್‌, ಬಿಕಾಂ ವಿಭಾಗದಲ್ಲಿ ಪ್ರಜ್ಞಾ ಕೆ ( ೯೬.೬೫ ಶೇ.) ಪ್ರಥಮ ರ್‍ಯಾಂಕ್‌ ಹಾಗೂ ಅಮೃತಾ(೯೬.೫೧ ಶೇ.) ದ್ವಿತೀಯ ರ್‍ಯಾಂಕ್‌. ಅಂತೆಯೇ ಬಿಸಿಎ ವಿಭಾಗದಲ್ಲಿ ಚೈತ್ರಾ ಯು.ಎಂ(೯೬.೨೯ ಶೇ.) ಪ್ರಥಮ ರ್‍ಯಾಂಕ್‌ ಮೇಘನಾ( ೯೫.೮೨ ಶೇ.) ದ್ವಿತೀಯ ರ್‍ಯಾಂಕ್‌ ಹಾಗೂ ದೀಕ್ಷಾ ಬಿ ( ೯೪.೨೨ ಶೇ.) ತೃತೀಯ ರ್‍ಯಾಂಕ್‌ ಗಳಿಸಿರುತ್ತಾರೆ.

ಸ್ನಾತಕೋತ್ತರ ಪದವಿಯಲ್ಲಿ ೨೦೨೨-೨೪ ಸಾಲಿನಲ್ಲಿ ಒಟ್ಟು ನಾಲ್ಕು ರ್‍ಯಾಂಕ್‌ ಗಳು ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಧನ್ಯಾಶ್ರೀ ಐ(೯.೦೩ ಸಿಜಿಪಿಎ) ಪ್ರಥಮ ರ್‍ಯಾಂಕ್‌, ಎಂಎಸ್ಸಿ ರಸಾಯನ ಶಾಸ್ತ್ರ ದಲ್ಲಿ ವಂದನಾ ಎಸ್.ಎಂ( ೮.೦೧ ಸಿಜಿಪಿಎ) ಪ್ರಥಮ ರ್‍ಯಾಂಕ್‌, ಎಂಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ವಿದ್ಯಾ ವಿ (೭.೦೫ ಸಿಜಿಪಿಎ) ಅವರು ಪ್ರಥಮ ರ್‍ಯಾಂಕ್‌ ಹಾಗೂ ಜೆಎಂಸಿ ವಿಭಾಗದಲ್ಲಿ ಲಾವಣ್ಯ ಎಸ್ (೮.೬೬ ಸಿಜಿಪಿಎ)ಪ್ರಥಮ ರ್‍ಯಾಂಕ್‌ ಕ್ರಮವಾಗಿ ಗಳಿಸಿರುತ್ತಾರೆ. ೨೦೨೩-೨೫ ರ ಸಾಲಿನಲ್ಲಿ ಪ್ರವೇಶಾತಿಯನ್ನು ಪಡೆದುಕೊಂಡ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ಮೂರು ರ್‍ಯಾಂಕ್‌ಗಳು ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಲಾವಣ್ಯ ಕೆ(೮.೮೩ ಸಿಜಿಪಿಎ) ಪ್ರಥಮ ರ್‍ಯಾಂಕ್‌, ಎಂಎಸ್ಸಿ ರಸಾಯನಶಾಸ್ತ್ರ ದಲ್ಲಿ ಮನಸ್ವಿ ಪಿ(೭.೫೭ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಹಾಗೂ ಜೆಎಂಸಿ ಯಲ್ಲಿ ಸುಲಕ್ಷಣಾ ಕೆ( ೮.೨೨ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ.