ಚಿಕ್ಕಮಗಳೂರುನಗರದ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆ ಡಾಂಬರೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಡಾಂಬರೀಕರಣ ಕಾಮಗಾರಿ ಪರಿಶೀಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆ ಡಾಂಬರೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು ₹10 ಕೋಟಿ ರು.ಗಳನ್ನು ತಂದು ಶಾಸಕ ಎಚ್.ಡಿ. ತಮ್ಮಯ್ಯ ನಗರದ ನಾಗರಿಕರಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕೆಂಬ ಗುರಿ ಹೊಂದಿದ್ದಾರೆಂದು ಹೇಳಿದರು.ನಗರಸಭೆಯಿಂದ ಜನತೆ ಪರವಾಗಿ ಶಾಸಕರಿಗೆ ಧನ್ಯವಾದ ಸಲ್ಲಿಸಬಯಸುತ್ತೇನೆ. ಶಾಸಕರು ಇನ್ನಷ್ಟು ಉತ್ತಮ ಸೇವೆ ಮೂಲಕ ಜನಪ್ರಿಯತೆ ಗಳಿಸಲಿ ಎಂದು ಹಾರೈಸಿದರು. ನಗರದಲ್ಲಿ ಈಗ ಯಾವುದೇ ರೀತಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಸಮಸ್ಯೆ ಇದೆ ಎಂದು ನಾಗರಿಕರು ದೂರು ನೀಡಿದರೆ ಖಂಡಿತ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಕಳೆದ ತಿಂಗಳು ಶಾಸಕ ಎಚ್.ಡಿತಮ್ಮಯ್ಯ ನೇತೃತ್ವದಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸೈಕಲ್ ತುಳಿ ಸಮಸ್ಯೆ ತಿಳಿ ಘೋಷಣೆಯೊಂದಿಗೆ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು ಎಂದು ಹೇಳಿದರು.ವಿಶೇಷ ಅನುದಾನದಲ್ಲಿ ₹10 ಕೋಟಿ ರು. ನಗರಸಭೆ ಅನುದಾನದಲ್ಲಿ ₹3 ಕೋಟಿ , ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ರವರ ಅನುದಾನದಲ್ಲಿ ₹2 ಕೋಟಿ ಸೇರಿ ಒಟ್ಟು ಸುಮಾರು ₹17 ಕೋಟಿ ವೆಚ್ಚದಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.ಯುಜಿಡಿ ಅಮೃತ್ ಯೋಜನೆಯಿಂದ ಹಾನಿಯಾಗಿದ್ದ ರಸ್ತೆಗಳನ್ನು ಈಗ ಸುಸ್ಥಿತಿಯಲ್ಲಿ ಡಾಂಬರೀಕರಣ ಮಾಡುವ ಮೂಲಕ ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಲಾಗಿದೆ. ಡಾಂಬರಿಕರಣದ ಬಳಿಕ ರಸ್ತೆ ಸಮರ್ಪಕವಾಗಲು ಸುಮಾರು 15 ದಿನ ಗಳು ಬೇಕಾಗುತ್ತದೆ. ಈ ಮಧ್ಯೆ ಕಳಪೆ ಕಾಮಗಾರಿಯಾಗಿದ್ದರೆ ಸಾರ್ವಜನಿಕರು ನೇರವಾಗಿ ನಗರಸಭಾಧ್ಯಕ್ಷ, ಪೌರಾಯುಕ್ತ ರಾದ ನನಗೆ ಹಾಗೂ ನಗರಸಭೆ ಎಂಜಿನಿಯರ್‌ಗೆ ದೂರು ಸಲ್ಲಿಸಿದರೆ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎ.ಸಿ.ಕುಮಾರ್‌ಗೌಡ, ಮಾಜಿ ಸದಸ್ಯ ದಿನೇಶ್, ಎಂಜಿನಿಯರ್‌ಗಳಾದ ಲೋಕೇಶ್, ಸೌಜನ್ಯ ಇದ್ದರು. 15 ಕೆಸಿಕೆಎಂ 2ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅವರು ಸೋಮವಾರ ಪರಿಶೀಲಿಸಿದರು.