ವಿಧಾನಸಭಾ ಚುನಾವಣೆ ನಂತರ ಕಳೆದ ಎರಡೂವರೆ ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಮರ ಸಾಗಣೆ (ಬೀಟಿ, ಹೊನ್ನೆ ತ್ಯಾಗ ಸೇರಿದಂತೆ ಬೆಲೆಬಾಳುವ ಮರಗಳ ಕಳ್ಳಸಾಗಣೆ), ಇಸ್ಪೀಟ್ ಜೂಜು (ಹಾನುಬಾಳು ಮತ್ತು ಸಕಲೇಶಪುರ ಸುತ್ತಮುತ್ತ), ಗಾಂಜಾ, ಡ್ರಗ್ಸ್, ಮಟ್ಕಾ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್, ಭೂ ಮಾಫಿಯಾ ಹಾಗೂ ಗೂಂಡಾ ಪ್ರವೃತ್ತಿಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಆರೋಪಿಸಿದರು. ಈ ಎಲ್ಲಾ ದಂಧೆಗಳು ನಿರಂತರವಾಗಿ ನಡೆಯಲು ತಾಲೂಕು ಆಡಳಿತ ಸಂಪೂರ್ಣವಾಗಿ ಹಿಡಿತ ತಪ್ಪಿರುವುದೇ ಮೂಲ ಕಾರಣ ಎಂದು ಆರೋಪಿಸಿದ ಸಂಘಟನೆಗಳು, ಈ ಅಕ್ರಮಗಳಿಗೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಅವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಮಾತುಗಳು ಕ್ಷೇತ್ರದ ಜನರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ದಂಧೆಗಳ ವಿರುದ್ಧ ಉಸ್ತುವಾರಿ ಸಚಿವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ತಮಟೆ ಚಳುವಳಿ ನಡೆಸಲಾಗುವುದು ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ದಿನೇಶ್ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ನಂತರ ಕಳೆದ ಎರಡೂವರೆ ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಮರ ಸಾಗಣೆ (ಬೀಟಿ, ಹೊನ್ನೆ ತ್ಯಾಗ ಸೇರಿದಂತೆ ಬೆಲೆಬಾಳುವ ಮರಗಳ ಕಳ್ಳಸಾಗಣೆ), ಇಸ್ಪೀಟ್ ಜೂಜು (ಹಾನುಬಾಳು ಮತ್ತು ಸಕಲೇಶಪುರ ಸುತ್ತಮುತ್ತ), ಗಾಂಜಾ, ಡ್ರಗ್ಸ್, ಮಟ್ಕಾ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್, ಭೂ ಮಾಫಿಯಾ ಹಾಗೂ ಗೂಂಡಾ ಪ್ರವೃತ್ತಿಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಆರೋಪಿಸಿದರು. ಈ ಎಲ್ಲಾ ದಂಧೆಗಳು ನಿರಂತರವಾಗಿ ನಡೆಯಲು ತಾಲೂಕು ಆಡಳಿತ ಸಂಪೂರ್ಣವಾಗಿ ಹಿಡಿತ ತಪ್ಪಿರುವುದೇ ಮೂಲ ಕಾರಣ ಎಂದು ಆರೋಪಿಸಿದ ಸಂಘಟನೆಗಳು, ಈ ಅಕ್ರಮಗಳಿಗೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಅವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಮಾತುಗಳು ಕ್ಷೇತ್ರದ ಜನರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕ್ಷೇತ್ರದ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಮಾದಕ ವಸ್ತುಗಳ ದಂಧೆಯಿಂದ ಕಾಫಿ ಬೆಳೆಗಾರರ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಸ್ಪೀಟ್ ಮತ್ತು ಮಟ್ಕಾ ದಂಧೆಯಿಂದ ಅನೇಕ ಕೂಲಿ ಕಾರ್ಮಿಕ ಹಾಗೂ ಬಡ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಜೂಜು, ಬೆಟ್ಟಿಂಗ್ ಹಾಗೂ ಮೋಜುಮಸ್ತಿಗೆ ಅವಕಾಶ ನೀಡಲಾಗುತ್ತಿದ್ದು, ಜನರ ಬದುಕು ನಾಶವಾಗುತ್ತಿದೆ ಎಂದು ದೂರಿದರು.ಈ ದಂಧೆಗಳ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಪೊಲೀಸ್ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಭಯಭೀತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ನಾಲ್ಕು ತಿಂಗಳ ಹಿಂದೆ ಹಾನುಬಾಳಿನಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರೂ ಯಾವುದೇ ಪರಿಣಾಮ ಕಂಡುಬಂದಿಲ್ಲ ಎಂದರು. ಜನವರಿ ೨೬ರಂದು ಹಾಸನಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿಯಾಗಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟವು ದೂರು ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಕಲೇಶಪುರ-ಆಲೂರು ಕ್ಷೇತ್ರದ ಬಡವರು, ಕೂಲಿ ಕಾರ್ಮಿಕರು, ಕಾಫಿ ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ, ಇದಕ್ಕೆ ಕಾರಣಕರ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲಾ ಸಚಿವರು ಹಾಸನಕ್ಕೆ ಆಗಮಿಸುವ ವೇಳೆ ದಲಿತ-ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ವಿಠಲ್, ಮಧು, ಜಗದೀಶ್, ನಾಗರಾಜು, ಚಂದ್ರು ಇತರರು ಉಪಸ್ಥಿತರಿದ್ದರು.