ಸಾರಾಂಶ
- ದೇಶ, ಅಂಬೇಡ್ಕರ್ ಬಗ್ಗೆ ಗೌರವವಿಲ್ಲದ ರಾಹುಲ್ ಗಾಂಧಿ: ಟೀಕೆ ।
- ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಹೊರಡಿಸಲಿ- - -
ಕನ್ನಡಪ್ರಭ ವಾರ್ತೆ ಹೊನ್ನಾಳಿಸಂವಿಧಾನದ ಪುಸ್ತಕ ಸದಾ ಕೈಯಲ್ಲಿ ಹಿಡಿದು ಓಡಾಡುವ ರಾಹುಲ್ ಗಾಂಧಿ ಮತಗಳ್ಳತನವಾಗಿದೆ ಎಂದು ಹೋರಾಟ ನಡೆಸಲು ಮುಂದಾಗಿದ್ದಾರೆ. ಇವರಿಗೆ ಅಂಬೇಡ್ಕರ್ ಬಗ್ಗೆಯಾಗಲಿ ಹಾಗೂ ದೇಶದ ಸಂವಿಧಾನದ ಬಗ್ಗೆಯಾಗಲಿ ಕಿಂಚಿತ್ತೂ ಗೌರವವಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.
ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅಜ್ಜಿ, ಮಾಜಿ ಪ್ರಧಾನಿಯಾದ ಇಂದಿರಾ ಗಾಂಧಿ ತಾವು ಅಧಿಕಾರ ಉಳಿಸಿಕೊಳ್ಳಲು ಅಂದು ರಾತ್ರೋರಾತ್ರಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಆ ಮೂಲಕ ಪ್ರಜಾತಂತ್ರದ ಕಗ್ಗೊಲೆ ಮಾಡಿದ್ದರು. ಇದನ್ನು ರಾಹುಲ್ ಗಾಂಧಿ ಮರೆತಂತಿದೆ ಎಂದು ಹೇಳಿದರು.ಜನವಿರೋಧಿ, ಸಂವಿಧಾನ ವಿರೋಧಿ ನೀತಿಯಿಂದ ಯಾವುದೇ ಕಾರಣಕ್ಕೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ದೇಶದ ಜನರ ಭಾವನೆಗಳನ್ನು, ಗಮನವನ್ನು ಬೇರೆಡೆಗೆ ಸೆಳೆಯಲು ಮತಗಳ್ಳತನದ ಆಧಾರರಹಿತ ಆರೋಪಗಳನ್ನು ಮಾಡುತ್ತ ರಾಹುಲ್ ಗಾಂಧಿಯವರು ಓಡಾಡುತ್ತಿದ್ದಾರೆ. ಸಾಧ್ಯವಾದರೆ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 3 ಬಾರಿ ಈ ದೇಶದ ಪ್ರಧಾನಿಯಾಗುವ ಮೂಲಕ ಇಂದಿರಾ ಗಾಂಧಿಯವರ ದಾಖಲೆ ಮುರಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯ ಆಡಳಿತ ನಡೆಸುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಕೆಲ ದಿನಗಳ ಹಿಂದೆ ತಮ್ಮ ತಂದೆಯವರು ಮೈಸೂರು ಮಹಾರಾಜರಿಗಿಂತ ಹೆಚ್ಚಾಗಿ ಮೈಸೂರನ್ನು ಅಭಿವೃದ್ಧಿ ಮಾಡಿದ್ದಾರೆ ಎಂದಿದ್ದಾರೆ. ಇದನ್ನು ಅವರು ದಾಖಲೆ ಸಮೇತ ಯಾವ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.ಸಚಿವ ಮಹಾದೇವಪ್ಪ ಅವರು ನಾಡಿನ ರೈತರ ಜೀವನಾಡಿ ಕೆಆರ್‌ಎಸ್‌ಗೆ ಅಡಿಪಾಯ ಹಾಕಿದವರು ಟಿಪ್ಪುಸುಲ್ತಾನ್ ಎಂದು ಸತ್ಯಕ್ಕೆ ದೂರವಾದ ಹಾಗೂ ಆಸಂಬದ್ಧ ಹೇಳಿಕೆ ನೀಡಿದ್ದಾರೆ. ಆ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಮಹಾದೇವಪ್ಪ ಅವರು ಮೊದಲು ನಾಡಿನ ಇತಿಹಾಸ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ನಾಡಿಗೆ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅನನ್ಯ ಹಾಗೂ ಅಪರಿಮಿತ. ಇದು ಸರ್ವಕಾಲಿಕ ಸತ್ಯವಾಗಿದೆ. ಇಂತಹ ಮೈಸೂರು ಅರಸು ಮನೆತನದವರ ಬಗ್ಗೆ ಹಗುರವಾಗಿ ಮಾತನಾಡಿ ಕೇವಲ ಅರಸು ಮನೆತನದವರಿಗೆ ಮಾತ್ರವಲ್ಲ, ರಾಜ್ಯದ ಇಡೀ ಜನರಿಗೆ ಅಪಮಾನ ಮಾಡಿದಂತಾಗಿದೆ. ಯತೀಂದ್ರ ಅವರು ಕೂಡಲೇ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೆ.ಪಿ. ಕುಬೇರಪ್ಪ, ಮುಖಂಡ ಎಸ್.ಎಸ್. ಬೀರಪ್ಪ, ಸಿ.ಆರ್. ಶಿವಾನಂದ, ಕುಮಾರ ಸ್ವಾಮಿ, ವಿಎಸ್‌ಎಸ್‌ಎನ್ ನಿರ್ದೇಶಕ ರಮೇಶ್ ಗೌಡ, ಬಡಾವಣೆ ರಂಗಪ್ಪ ಇದ್ದರು.
- - -(ಕೋಟ್) ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕದನ ನಡೆಯುತ್ತಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ನಡೆಯುತ್ತಿಲ್ಲ. ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರನ್ನು ಓವರ್ ಟೇಕ್ ಮಾಡಿ ಶಾಸಕರ ಸಭೆ ನಡೆಸುತ್ತಾ ಸೂಪರ್ ಸಿಎಂ ತರಹ ವರ್ತಿಸುತ್ತಿದ್ದಾರೆ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - -
-4ಎಚ್.ಎಲ್.ಐ3.ಜೆಪಿಜಿ:ಹೊನ್ನಾಳಿ ನಿವಾಸದಲ್ಲಿ ಸೋಮವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.