ಸಾರಾಂಶ
ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನಾನು ಹಿಂದುಳಿದ ಸಮುದಾಯದವರಲ್ಲಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದ್ದೇನು. ನನ್ನ ನಿರೀಕ್ಷೆಗೂ ಮೀರಿ ಎಲ್ಲ ಸಮುದಾಯದ ಮುಖಂಡರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಸನ್ಮಾನಿತರು ಸಹಕಾರ ನೀಡಿದರು.
ರಾಮನಗರ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 110ನೇ ಜಯಂತಿಯನ್ನು ಇತಿಹಾಸ ಪುಟದಲ್ಲಿ ಉಳಿಯುವಂತೆ ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ ಚುನಾಯಿತ ಪ್ರತಿನಿಧಿಗಳು ಹಾಗೂ ಐದು ತಾಲೂಕುಗಳ ಹಿಂದುಳಿದ ಜಾತಿಗಳ ಅಧ್ಯಕ್ಷರು, ಮುಖಂಡರು ಹಾಗೂ ಸಮಸ್ತ ಜನತೆಗೆ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು ಮತ್ತು ಕಾರ್ಯದರ್ಶಿ ಟಿ.ವಿ.ನಾರಾಯಣ್ ಕೃತಜ್ಞತೆ ಸಲ್ಲಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮ ನೆನಪಿನಲ್ಲಿ ಉಳಿಯುವಂತೆ ಸ್ಮರಣೀಯವಾಗಿದೆ. ಹಿಂದುಳಿದ ಜಾತಿಗಳ ವಿವಿಧ ಸಮುದಾಯದವರು ಮೆರವಣಿಗೆಯಲ್ಲಿ ತಮ್ಮದೇ ಆದ ಟ್ಯಾಬ್ಲೋದೊಂದಿಗೆ ಸಾಗಿದ್ದು, ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾದರು ಎಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನಾನು ಹಿಂದುಳಿದ ಸಮುದಾಯದವರಲ್ಲಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದ್ದೇನು. ನನ್ನ ನಿರೀಕ್ಷೆಗೂ ಮೀರಿ ಎಲ್ಲ ಸಮುದಾಯದ ಮುಖಂಡರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಸನ್ಮಾನಿತರು ಸಹಕಾರ ನೀಡಿದರು. ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಅವರ ಸಹಕಾರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಭಾಪತಿ ಸುದರ್ಶನ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ಉಪಸ್ಥಿತಿ ಜೊತೆಗೆ ಅವರ ಸ್ಫೂರ್ತಿದಾಯಕ ಮಾತುಗಳಿಂದ ನಮ್ಮ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ ಎಂದರು.
ಮುಂದಿನ ದಿನಗಳಲ್ಲಿ ಇದೇ ರೀತಿ ಹಿಂದುಳಿದ ಸಮುದಾಯದ ಪ್ರಗತಿಗಾಗಿ ಒಟ್ಟಾಗಿ ಎಲ್ಲರೂ ಶ್ರಮಿಸುತ್ತೇವೆ. ಇದಕ್ಕೆ ರಾಮನಗರದಲ್ಲಿ ನಡೆದ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಯಶಸ್ವಿ ಕಾರ್ಯಕ್ರಮ ನಮಗೆ ಪ್ರೇರಣೆಯಾಗಿದೆ ಎಂದು ರೈಡ್ ನಾಗರಾಜು ಮತ್ತು ಟಿ.ವಿ.ನಾರಾಯಣ್ ಹೇಳಿದರು.