ಹೊಸದುರ್ಗದಲ್ಲಿ ಮೊಳಗಿದ ರಾಮನಾಮ ಜಪ

| Published : Jan 23 2024, 01:45 AM IST

ಸಾರಾಂಶ

ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ದ ಲೋಕಾರ್ಪಣೆ ಹಾಗೂ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಹೊಸದುರ್ಗದಲ್ಲಿ ರಾಮೋತ್ಸವ ಸಂಭ್ರಮ ಮನೆಮಾಡಿತ್ತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪಟ್ಟಣವು ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಶ್ರೀರಾಮನ ಭಕ್ತರು, ಬಜರಂಗದಳದ ಕಾರ್ಯಕರ್ತರು ಹಾಗೂ ವಿಶ್ವ ಹಿಂದೂ ಪರಿಷತ್‌ನ ಸದಸ್ಯರು ಬಾಲರಾಮನ ಪ್ರತಿಷ್ಠಾಪನೆಯನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಈ ಸಂಬಂದ ಪಟ್ಟಣದ ಬಹುತೇಕ ರಸ್ತೆಗಳು, ಬಡಾವಣೆಗಳು ಕೇಸರಿ ಬಣ್ಣದ ತೋರಣಗಳಿಂದ ಅಲಕೃಂತಗೊಂಡಿದ್ದವು. ಇಡೀ ಪಟ್ಟಣವನ್ನು ಕೇಸರಿ ಬಣ್ಣದಿಂದ ಸಿಂಗಾರಗೊಳಿಸಲಾಗಿತ್ತು.ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಲೋಕಾರ್ಪಣೆ ಹಾಗೂ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ರಾಮೋತ್ಸವದ ಸಂಭ್ರಮ ಪ್ರತಿಮನೆಯಲ್ಲೂ ಹಬ್ಬದ ವಾತಾವರಣಕ್ಕೆ ಕಾರಣವಾಗಿತ್ತು. ಪಟ್ಟಣದ ಕೋಟೆಯ ಶ್ರೀರಾಮ ದೇವಾಲಯದಲ್ಲಿ ವಿಶೇಷ ರಾಮತಾರಕ ಹೋಮವನ್ನು ನಡೆಸಲಾ ಯಿತು. ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದವು. ಮಧ್ಯಾಹ್ನ ಪೂರ್ಣಹುತಿಯ ನಂತರ ನಿರಂತರ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಖಾಸಗಿ ಬಸ್ ಬಸ್ ನಿಲ್ದಾಣದ ಮಠದ ಹೊಂಡದ ಬಳಿ ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ರಾಮೋತ್ಸವಕ್ಕೆ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಶ್ರೀರಾಮನ ಪೂಜಾ ಕಾರ್ಯಕ್ರಮದ ಜೊತೆಗೆ 6 ವರ್ಷದ ಒಳಗಿನ ಮಕ್ಕಳಿಗೆ ರಾಮನ ವೇಷ ಧರಿಸುವ ವಿಶೇಷ ಸ್ಪರ್ಧೆಯನ್ನು ನಡೆಸಿದರು. ಹಳೆ ಬಸ್ ನಿಲ್ದಾಣದ ಬಳಿ ವಿರಾಟ್ ಹಿಂದೂ ಮಹಾ ಸಾಗರ ಗಣಪತಿ ವತಿಯಿಂದ ಶ್ರೀರಾಮನ ಅಲಂಕಾರ ಮಾಡುವ ಮೂಲಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರೆ ಉಳಿದಂತೆ ಪಟ್ಟಣದ ದುರ್ಗಾಂಬಿಕ ದೇವಿ ದೇವಾಲಯ, ಕೋಟೆ ಈಶ್ವರ ದೇವಾಲಯ, ಕೊಬ್ಬರಿ ಪೇಟೆ, ವಿನಾಯಕ ಬಡಾವಣೆಗಳಲ್ಲಿ ವಿಜೃಂಭಣೆಯ ರಾಮೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ರಾಮ ಪಾದುಕೆ ದರ್ಶನ: 1992ರಲ್ಲಿ ರಾಮಮಂದಿರದ ಕರಸೇವೆ ಚಳವಳಿ ನಡೆಯುತ್ತಿದ ವೇಳೆಯಲ್ಲಿ ಜನಾಂದೋಲನ ರೂಪಿಸಲು ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ರಾಮಪಾದುಕಾ ಯಾತ್ರೆ ಹೊಸದುರ್ಗಕ್ಕೆ ಬಂದಾಗ ಗಲಾಟೆ ಸಂಭವಿಸಿದ ಹಿನ್ನಲೆಯಲ್ಲಿ ಯಾತ್ರೆಯ ಭಾಗವಾಗಿದ್ದ ಪಾದುಕೆಗಳು ಪಟ್ಟಣದ ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ಇಡಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ರಾಮ ಮಂದಿರದ ಹೋರಾಟಕ್ಕೆ ಸಾಕ್ಷಿಯಾಗಿರುವ ಪಾದುಕೆಗಳನ್ನು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.ತಾಲೂಕಿನಲ್ಲಿ ಶ್ರೀರಾಮನು ಪೂಜಿಸಿದ ಕ್ಷೇತ್ರಗಳೆನ್ನಲಾದ ಹಾಲುರಾಮೇಶ್ವರ, ದಶರಥರಾಮೇಶ್ವರ ಕ್ಷೇತ್ರಗಳಲ್ಲಿಯೂ ವಿಶೇಷ ಪೂಜೆ ಸೇರಿದಂತೆ ಅನ್ನ ದಾಸೋಹಗಳು ನಡೆದವು. ಉಳಿದಂತೆ ಆಂಜನೇಯನ ಪ್ರಸಿದ್ಧ ಕ್ಷೇತ್ರಗಳಾದ ಸೋಮಸಂದ್ರ, ಬೆಲಗೂರು ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳ ಆಂಜನೇಯ ದೇಗುಲಗಳಲ್ಲಿ ಹಾಗೂ ರಾಮಮಂದಿರಗಳಲ್ಲಿ, ವಾಸವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ , ಹೋಮ ಹವನಗಳು ನಡೆದವು.ಮನೆಮನೆಯಲ್ಲೂ ದಿಪೋತ್ಸವ: ಪಟ್ಟಣದ ಪ್ರತಿ ಮನೆಗೂ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ತಲುಪಿಸಲಾಗಿದೆ. ಮಂತ್ರಾಕ್ಷತೆಯನ್ನು ಪಡದಿರುವ ಗೃಹಿಣಿಯರು ಮನೆಮನೆ ಯಲ್ಲೂ ರಾಮನ ಹೆಸರಿನಲ್ಲಿ ದೀಪಗಳನ್ನು ಹಚ್ಚುವ ಮೂಲಕ ರಾಮೋತ್ಸವದಲ್ಲಿ ಪಾಲ್ಗೊಂಡರು. ಮನೆಯ ಮುಂದೆ ರಂಗವಲ್ಲಿ ಹಾಕಿ ದೀಪ ಹಚ್ಚುವ ಮೂಲಕ ರಾಮನಿಗೆ ಭಕ್ತಿ ಸಮರ್ಪಿಸಿದರು.ಉಚಿತ ಬಸ್‌ ಸೇವೆ: ತಾಲೂಕಿನ ಮೂಕಾಂಬಿಕ ಬಸ್‌ ಮಾಲೀಕರಾದ ಬಿಪಿ ಚಂದ್ರಶೇಖರ್‌ ಅವರು ರಾಮೋತ್ಸವದ ಅಂಗವಾಗಿ ಇಂದು ಅವರ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು.