ಸಾರಾಂಶ
ಶಾಸಕರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು ಬೇಡ. ಜನರು ಕೊಟ್ಟ ಅಧಿಕಾರವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಿ. ನನಗೆ ಕ್ರಿಕೆಟ್ ಎಂದರೆ ಏನೆಂದೇ ತಿಳಿದಿಲ್ಲ. ನಾನು ಬೆಟ್ಟಿಂಗ್ ನಡೆಸುತ್ತೀನಾ. ಯುವಕರ ಭವಿಷ್ಯವನ್ನು ನಾನು ಹಾಳು ಮಾಡುತ್ತೀನಾ. ಜನರೊಂದಿಗೆ ಇರಬೇಕೆಂಬ ಕಾರಣಕ್ಕೆ ಸಾಮಾಜಿಕ ಸೇವಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ.
ಕನ್ನಡಪ್ರವಾರ್ತೆ ಮಂಡ್ಯ
ನನ್ನ ಜೊತೆ ಕ್ರಿಕೆಟ್ ಬೆಟ್ಟಿಂಗ್ ಅಥವಾ ಇಸ್ಪೀಟ್ ದಂಧೆ ನಡೆಸುವವರಿದ್ದರೆ ತೋರಿಸಲಿ. ಅದನ್ನು ಬಿಟ್ಟು ಶಾಸಕರು ಸುಮ್ಮನೆ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಾ ಜೆಡಿಎಸ್ ಪಕ್ಷದವರಿಗೆ ಕಿರುಕುಳ ನೀಡಬಾರದು ಎಂದು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ದೂಷಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಚಂದ್ರ ಯಾವ ರೀತಿಯ ಮನುಷ್ಯ, ಅವನೇನು ಮಾಡುತ್ತಿದ್ದಾನೆ ಎನ್ನುವುದನ್ನು ಶಾಸಕರು ಜನರ ಬಳಿ ಕೇಳಿ ತಿಳಿದುಕೊಳ್ಳಲಿ. ಜನರು ನಿಮ್ಮನ್ನು ಅಭಿವೃದ್ಧಿ ಮಾಡುವುದಕ್ಕೋಸ್ಕರ ಗೆಲ್ಲಿಸಿದ್ದಾರೆ. ಅದನ್ನು ಮರೆತು ಇಂತಹ ಗೊಂದಲ ಸೃಷ್ಟಿಸದೆ ಅಭಿವೃದ್ಧಿಯ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.
ನನಗೆ ಕ್ರಿಕೆಟ್ ಎಂದರೆ ಏನೆಂದೇ ತಿಳಿದಿಲ್ಲ. ನಾನು ಬೆಟ್ಟಿಂಗ್ ನಡೆಸುತ್ತೀನಾ. ಯುವಕರ ಭವಿಷ್ಯವನ್ನು ನಾನು ಹಾಳು ಮಾಡುತ್ತೀನಾ. ಜನರೊಂದಿಗೆ ಇರಬೇಕೆಂಬ ಕಾರಣಕ್ಕೆ ಸಾಮಾಜಿಕ ಸೇವಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ. ಯುವಕರನ್ನು ಹಾಳುಮಾಡುವಂತಹ ದುರ್ಬುದ್ಧಿ ನನ್ನಲ್ಲಿಲ್ಲ. ನನ್ನ ಹಿಂದೆ ಜನರಿದ್ದಾರೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಅವರೇ ಉತ್ತರ ಕೊಡುತ್ತಾರೆ. ನನ್ನೊಂದಿಗೆ ಇರುವವರೆಲ್ಲಾ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು. ಅಂತಹ ದಂಧೆ ನಡೆಸುವವರು ನನ್ನೊಂದಿಗಿದ್ದರೆ ತೋರಿಸಲಿ. ನಾನೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇನೆ. ಶಾಸಕರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದರು.ಕ್ಷೇತ್ರದಲ್ಲಿ ಗುದ್ದಲಿ ಪೂಜೆ, ಶಂಕುಸ್ಥಾಪನೆ ನಡೆಯುತ್ತಿವೆಯೇ ವಿನಃ ಅಭಿವೃದ್ಧಿ ಕಾಮಗಾರಿಗಳು ಮಾತ್ರ ನಡೆಯುತ್ತಿಲ್ಲ. ಇವುಗಳ ಬಗ್ಗೆ ಶಾಸಕರು ಗಮನ ಹರಿಸಲಿ. ಅಭಿವೃದ್ಧಿ ಮಾತಿನಲ್ಲಿರದೆ ಕಾರ್ಯರೂಪಕ್ಕೆ ತರಬೇಕು. ಸುಮ್ಮನೆ ಗೊಂದಲ ಸೃಷ್ಟಿಸುತ್ತಾ ಕಾಲಹರಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಜನರು ಕೊಟ್ಟಿರುವ ಅಧಿಕಾರವನ್ನು ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕು. ಜನರ ಸಂಕಷ್ಟಗಳಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಉದಾರತೆಯನ್ನು ತೋರಿಸಲಿ. ಅದನ್ನು ಬಿಟ್ಟು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಇನ್ನೊಬ್ಬರನ್ನು ಗುರಿಯಾಗಿಸಿಕೊಂಡು ಟೀಕಿಸುವ ಮನೋಸ್ಥಿತಿಗೆ ಇಳಿಯಬಾರದು ಎಂದರು.ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಇತರರು ಇದ್ದರು.