ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಾಲ್ಮೀಕಿ ರಾಮಾಯಣವೂ ಸೇರಿದಂತೆ ಜಗತ್ತಿನ ಸಾವಿರಾರು ರಾಮಾಯಣಗಳು ಕೇವಲ ಕಥೆ ಅಲ್ಲ. ಅದೊಂದು ಅನುಭವ. ರಾಮನ ವ್ಯಕ್ತಿತ್ವವನ್ನು ಸರಿಯಾದ ನಿಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಕೇವಲ ಒಂದು ರಾಮಾಯಣವನ್ನು ಓದಿದರೆ ಸಾಲದು. ಹತ್ತುಹಲವು ಆಯಾಮಗಳಲ್ಲಿ ಚಿತ್ರಿತ ಆಗಿರುವ ರಾಮಾಯಣಗಳನ್ನು ಅಧ್ಯಯನ ಮಾಡಬೇಕು ಎಂದು ಮಲಯಾಳಂ ಸಾಹಿತಿ ಪುನಕ್ಕಲ್ ನಾರಾಯಣನ್ ವಿಶ್ಲೇಷಿಸಿದರು.ನಗರದ ಎನ್‌ಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಬಹುಮುಖಿಯ 31ನೇ ಉಪನ್ಯಾಸ-ಸಂವಾದ ಮಾಲಿಕೆಯಲ್ಲಿ ಅವರು ಮಾತನಾಡಿ, ರಾಮಯಣ ಅಂಧಕಾರವನ್ನು ತೊಡೆದು ಹಾಕುವ ಜ್ಯೋತಿಯ ಸಂಕೇತ ಎಂದು ಬಣ್ಣಿಸಿದರು.
ಹಾಗೆ ನೋಡಿದರೆ, ರಾಮಾಯಣ, ಮಹಾಭಾರತ ವೇದಗಳ ಮೂಲದಿಂದಲೇ ಸೃಷ್ಟಿಯಾದವುಗಳು. ಮಹಾವಿಷ್ಣು, ಶ್ರೀರಾಮ ಹಾಗೂ ಕೃಷ್ಣರ ವ್ಯಕ್ತಿತ್ವವನ್ನು ಈ ಮಹಾನ್ ಗ್ರಂಥಗಳು ಕಟ್ಟಿಕೊಡುತ್ತವೆ. ಶ್ರೀರಾಮ ಹಾಗೂ ಶ್ರೀ ಕೃಷ್ಣರನ್ನು ಮಹಾವಿಷ್ಣುವಿನ ಅವತಾರ ಎಂದೇ ಹೇಳಲ್ಪಟ್ಟಿದ್ದರೂ, ಇವರು ಸಾಮಾನ್ಯರಾಗಿ, ಸಾಮಾನ್ಯರಿಗಾಗಿ ತಮ್ಮ ವ್ಯಕ್ತಿತ್ವದ ಮೂಲಕ ಬಹುದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ ಎಂದರು.ಭಾರತವೂ ಸೇರಿದಂತೆ ಜಗತ್ತಿನಲ್ಲಿ ಸಾವಿರಾರು ರಾಮಾಯಣಗಳು ಸೃಷ್ಟಿ ಆಗಿರುವುದೇ, ಅದರ ಸಾರ್ವಕಾಲಿಕ ಮಹತ್ವವನ್ನು ಸಾರುತ್ತದೆ. ನಾರದ ರಾಮಾಯಣ, ಅಗಸ್ತ್ಯ ರಾಮಾಯಣ, ದೇವ ರಾಮಾಯಣ, ತುಳಸಿ ರಾಮಾಯಣ, ನಿರ್ಣಯ ರಾಮಾಯಣ, ರಾಮಾಯಣದರ್ಶನಂ ಸೇರಿದಂತೆ ಹಲವಾರು ರಾಮಾಯಣಗಳು ಕಾಲಕಾಲಕ್ಕೆ ಸೃಷ್ಟಿಯಾಗಿವೆ. ಆದರೂ ಸಹ, ಈ ಎಲ್ಲ ರಾಮಾಯಣಗಳ ಆಶಯ ಶ್ರೀರಾಮನ ವ್ಯಕ್ತಿತ್ವನ್ನು ಕಟ್ಟಿಕೊಡುವುದೇ ಆಗಿದೆ ಎಂದು ವಿವರಿಸಿದರು.
ರಾಮಾಯಣಗಳಲ್ಲಿ ಕೆಲವು ದೃಷ್ಟಾಂತಗಳು ಬೇರೆ ಬೇರೆ ಆಗಿರಬಹುದು. ಕೆಲವು ದೃಷ್ಟಾಂತಗಳು ಇಲ್ಲದೆಯೂ ಇರಬಹುದು. ಆದರೆ, ಎಲ್ಲಿಯೂ ಕೂಡ ಮೂಲ ವಾಲ್ಮೀಕಿ ರಾಮಾಯಣದ ಆಶಯಕ್ಕೆ ಪೂರಕವಾಗಿದೆಯೇ ವಿನಃ ಬೇರೆ ಬೇರೆಯಾಗಿ ಉಳಿದಿಲ್ಲ. ರಾಮಾಯಣವನ್ನು ಓದುವಾಗ ಅಥವಾ ಕೇಳುವಾಗ ನಾವು ತಾದಾತ್ಮ್ಯದಿಂದ ಗ್ರಹಿಸಿದಾಗ ಮಾತ್ರ ವಿಶಿಷ್ಟ ಅನುಭೂತಿ ದೊರೆಯುತ್ತದೆ ಎಂದರು.ತಾವೇ ರಚಿಸಿದ ಸಮ್ಮಿಶ್ರ ರಾಮಾಯಣದ ಪ್ರಸಂಗಗಳನ್ನು ವಿವರಿಸಿದ ಅವರು, ಇದು ವಿವಿಧ ರಾಮಾಯಣಗಳನ್ನು ಆಧರಿಸಿ, ರೂಪಿಸಿದ ರಾಮಾಯಣ. ಹೀಗಾಗಿಯೇ ಇದಕ್ಕೆ ಸಮ್ಮಿಶ್ರ ರಾಮಾಯಣ ಎಂದು ಹೆಸರಿಸಲಾಗಿದೆ. ರಾಮಾಯಣ ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಳ್ಳುತ್ತಲೇ, ರೂಪಾಂತರ ಹೊಂದುತ್ತಿರುತ್ತದೆ ಎಂದರು.
ಸಾಹಿತಿ ಕೆ.ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಚ್.ಎಸ್. ನಾಗಭೂಷಣ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರಾಮಾಯಣ ಪಾತ್ರಗಳ ಕುರಿತು ಸಂವಾದ ನಡೆಯಿತು.- - -
ಕೋಟ್ ರಾಮಾಯಣ, ಮಹಾಭಾರತಗಳು ನಮ್ಮ ದೈನಂದಿನ ಪ್ರಾರ್ಥನೆಯ ಒಟ್ಟು ಮೊತ್ತ. ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮ, ಮೃತ್ಯೋಮ ಅಮೃತಂಗಮಯ ಎಂಬ ಪ್ರಾರ್ಥನೆಯ ವಿಸ್ತುೃತರೂಪ. ಹೀಗಾಗಿ ರಾಮಾಯಣ, ಮಹಾಭಾರತವನ್ನು ಕೇವಲ ಕಥೆಗೆ ಸೀಮಿತಗೊಳಿಸಬಾರದು- ಪುನಕ್ಕಲ್ ನಾರಾಯಣನ್, ಸಮ್ಮಿಶ್ರ ರಾಮಾಯಣ ರಚನೆಕಾರ
- - - -13ಎಸ್‌ಎಂಜಿಕೆಪಿ05:ಶಿವಮೊಗ್ಗದ ನಗರದ ಎನ್‌ಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಬಹುಮುಖಿಯ 31ನೇ ಉಪನ್ಯಾಸ-ಸಂವಾದ ಮಾಲಿಕೆಯಲ್ಲಿ ಮಲೆಯಾಳಂ ಸಾಹಿತಿ ಪುನಕ್ಕಲ್ ನಾರಾಯಣನ್ ಮಾತನಾಡಿದರು.