ಸಾರಾಂಶ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿನ ಕನ್ನಡ ವಿಭಾಗವು, ಐಕ್ಯೂಎಸಿಯೊಂದಿಗೆ ರಸಋಷಿ ಕುವೆಂಪು ಜನ್ಮದಿನಾಚರಣೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕುವೆಂಪು ಅವರನ್ನು ಬಹುವಾಗಿ ಪ್ರಭಾವಿಸಿದ್ದು ನಿಸರ್ಗ, ವೈಚಾರಿಕತೆ ಮತ್ತು ಮಾನವನ ಘನತೆ. ಕುವೆಂಪು ತನ್ನ ಕಾಲದ ಸಾಂಸ್ಕೃತಿಕ ತುರ್ತನ್ನು ಅರಿತುಕೊಂಡು ತಮ್ಮ ಸಾಹಿತ್ಯದಲ್ಲಿ ಅದನ್ನು ಅಳವಡಿಸಿಕೊಂಡವರು. ತಮ್ಮ ಜೀವನದುದ್ದಕ್ಕೂ ಹೇಳಿಕೊಂಡು ಬಂದಂತಹ ಸಾಮಾಜಿಕ ಮೌಲ್ಯಗಳನ್ನು ಅವರು ತಮ್ಮ ಬದುಕಿನಲ್ಲಿ ಅನುಷ್ಠಾನಗೊಳಿಸಿದಂತಹ ನಡವಳಿಕೆಯ ಸಂಹಿತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದು ಮೊದಲು ನಮ್ಮ ಯುವ ತಲೆಮಾರಿಗೆ ತಲುಪಬೇಕು ಎಂದು ಉಪನ್ಯಾಸಕಿ ಡಾ. ರೇಖಾ ವಿ. ಬನ್ನಾಡಿ ಹೇಳಿದರು.ಅವರು ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿನ ಕನ್ನಡ ವಿಭಾಗವು, ಐಕ್ಯೂಎಸಿಯೊಂದಿಗೆ ಆಯೋಜಿಸಿದ್ದ ರಸಋಷಿ ಕುವೆಂಪು ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಮಾತನಾಡಿ, ಕುವೆಂಪು ಅವರ ಸಾಹಿತ್ಯದ ಆದರ್ಶವನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ, ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂದ, ಕನ್ನಡ ವಿಭಾಗದ ಉಪನ್ಯಾಸಕರಾದ ಶರಿತಾ, ಸಂಧ್ಯಾರಾಣಿ, ಭಾರತಿ, ಅರ್ಚನಾ ಉಪಸ್ಥಿತರಿದ್ದರು.ಗ್ರಂಥಪಾಲರಾದ ಕೃಷ್ಣ, ಕುವೆಂಪು ಗೀತ ಗಾಯನ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.