ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾರೂ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ಪಟ್ಟಣ ಸಮೀಪದ ಗಂಜಾಂನ ದಾರುಲ್ ಉಮೂರ್ ಶಾಹೀನ್ ಅಕಾಡೆಮಿ ಸಂಸ್ಥೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
2024ರ ಡಿ.7ರಿಂದ 2025ರ ಮಾ.23ರವರೆಗೆ ಕ್ಷಯರೋಗ ಅಭಿಯಾನ ನಡಯೆಲಿದೆ. ಕ್ಷಯ ರೋಗ ಪತ್ತೆ ಹೆಚ್ಚುವುದು, ಮರಣದ ಪ್ರಮಾಣ ಕಡಿಮೆ ಮಾಡುವುದು ಹಾಗೂ ಹೊಸ ಕ್ಷಯ ರೋಗಿಗಳು ಉಲ್ಬಣವಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಗುರಿ ಮತ್ತು ಉದ್ದೇಶವಾಗಿದೆ ಎಂದರು.ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಕ್ಷಯರೋಗ ಲಕ್ಷಣಗಳ ಬಗ್ಗೆ ವಿವರಿಸಿದರು. ಕ್ಷಯ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಅಕಾಡೆಮಿ ಸಂಸ್ಥೆ ತರಬೇತಿ ಶಿಕ್ಷಕರಾದ ವಜೀದ್ ವುಲ್ಲಾ, ಶಾಹೀದ ಅಲಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹದೇವಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ್, ಆಶಾ ಕಾರ್ಯಕರ್ತೆ ಚಾಂದಿನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.ಇಂದು ವಿದ್ಯುತ್ ವ್ಯತ್ಯಯ
ಮದ್ದೂರು:ಪಟ್ಟಣದ 66/11 ವಿದ್ಯುತ್ ವಿತರಣಾ ಕೇಂದ್ರದಿಂದ ಮಂಡ್ಯ ಮಾರ್ಗದ 66 ಕೆ.ವಿ. ಹಾಗೂ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ 66 ಕೆ.ವಿ.ಮಾರ್ಗದಲ್ಲಿ ಬ್ರೇಕ್ ಕರ್ ಮತ್ತು ಸಿ.ಟಿ. ಬದಲಾವಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜ.8ರಂದು ಎಲ್ಲಾ ಫೀಡರ್‌ಗಳ ವ್ಯಾಪ್ತಿಯ ಮದ್ದೂರು ಟೌನ್ ವಿವೇಕಾನಂದ ನಗರ, ಎಚ್‌ಕೆವಿ ನಗರ, ತಾಲೂಕಿನ ಬೆಸಗರಹಳ್ಳಿ, ಸಿ.ಎ.ಕೆರೆ, ಕ್ಯಾತಘಟ್ಟ, ಮಠದದೊಡ್ಡಿ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕ್ಲೀನ್ ಫ್ಯಾಕ್ಸ್ ಕಾರ್ಖಾನೆ, ಛತ್ರದ ಹೊಸಳ್ಳಿ, ವಳಗೆರೆಹಳ್ಳಿ, ಸಾದೊಳಲು, ಗುರುದೇವರಹಳ್ಳಿ, ಗೆಜ್ಜಲಗೆರೆ ಮನ್ಮುಲ್ ಡೈರಿ , ಬಸವನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.