ಕೃಷಿ ಪ್ರಧಾನ ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸುಮಾರು ೧.೮೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಭತ್ತದ ಬೆಳೆ ಒಡೆ ಕಡೆದು ಕಾಳು ಕಟ್ಟುವ ಹಂತಕ್ಕೆ ತಿರುಗಿದೆ. ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ವ್ಯಾಪ್ತಿಯ ನಾಲೆಗಳಿಗೆ ಕೂಡಲೇ ನೀರು ಹರಿಸಿ ಭತ್ತದ ಫಸಲನ್ನು ರಕ್ಷಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಪ್ರಧಾನ ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸುಮಾರು ೧.೮೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಭತ್ತದ ಬೆಳೆ ಒಡೆ ಕಡೆದು ಕಾಳು ಕಟ್ಟುವ ಹಂತಕ್ಕೆ ತಿರುಗಿದೆ. ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ವ್ಯಾಪ್ತಿಯ ನಾಲೆಗಳಿಗೆ ಕೂಡಲೇ ನೀರು ಹರಿಸಿ ಭತ್ತದ ಫಸಲನ್ನು ರಕ್ಷಿಸಬೇಕೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶೇ.೬೦ರಷ್ಟು ಭತ್ತದ ಬೆಳೆಗೆ ತುರ್ತಾಗಿ ಒಂದು ಕಟ್ಟು ನೀರು ಬೇಕಾಗಿದೆ. ಸಕಾಲಿಕವಾಗಿ ನೀರು ಹರಿಸದಿದ್ದರೆ ಭತ್ತದ ಫಸಲು ಅಪಾರ ಪ್ರಮಾಣದಲ್ಲಿ ನಾಶವಾಗಿ ಜೊಳ್ಳಾಗಲಿದೆ. ವಾಡಿಕೆಯಂತೆ ಮೇ ೧೨ರಂದು ನಾಲೆಗಳಿಗೆ ನೀರು ಹರಿಸಿದರೆ ಜಮೀನುಗಳಿಗೆ ತಲುಪಲು ಹೆಚ್ಚುವರಿಯಾಗಿ ಮೂರ್ನಾಲ್ಕು ದಿನಗಳು ಬೇಕಾಗುತ್ತದೆ. ಇದನ್ನು ಮನಗಂಡು ರೈತರಿಗಾಗುವ ನೂರಾರು ಕೋಟಿ ರು. ನಷ್ಟವನ್ನು ತಪ್ಪಿಸಲು ಕೂಡಲೇ ಕನ್ನಂಬಾಡಿ ನದಿ ಪಾತ್ರದ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಭತ್ತ ಖರೀದಿ ಕೇಂದ್ರ ತೆರೆಯಲಿ:

ಭತ್ತ ಕಟಾವಿಗೆ ಮೊದಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಸನ್ನದ್ಧವಾಗಬೇಕು. ಭತ್ತ ಕಟಾವು ನಂತರದಲ್ಲಿ ಖರೀದಿ ಕೇಂದ್ರ ತೆರೆದರೆ ಭತ್ತ ದಲ್ಲಾಳಿಗಳ ಪಾಲಾಗಿ ರೈತರಿಗೆ ನಷ್ಟವಾಗಲಿದೆ. ಆದ್ದರಿಂದ ಭತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಧಿಕ ಪ್ರಮಾಣದ ಕೃಷಿಯಲ್ಲಿರುವ ರೈತರಿಗೆ ರಸಗೊಬ್ಬರ ದಾಸ್ತಾನು ಕೊರತೆ ಇದೆ. ಯೂರಿಯಾ ಕೊರತೆಯಿಂದ ಹಲವಾರು ಬೆಳೆಗಳ ಬೆಳವಣಿಗೆಗೆ ತೊಂದರೆಯಾಗಿದೆ. ರಾಜ್ಯದ ಕೃಷಿ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದರ ನಡುವೆಯೂ ಯೂರಿಯಾ ಅಭಾವದಿಂದ ರೈತ ನಲುಗುತ್ತಿದ್ದು, ಕಾಳಸಂತೆಯಲ್ಲಿ ಯೂರಿಯಾ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಬ್ಬು ಕಟಾವಿಗೆ ಕೂಲಿ ಆಳುಗಳ ಅವಶ್ಯ:

ಮುಂದಿನ ಜೂನ್ ಮಾಹೆಯಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಸೇರಿದಂತೆ ಇತರೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಸೂಕ್ತ ಸಿದ್ಧತೆಗಳನ್ನು ಕೈಗೊಂಡು ಅಪಾರವಾಗಿ ಬೆಳೆದು ನಿಂತಿರುವ ಕಬ್ಬಿನ ಬೆಳೆ ವಿಲೇವಾರಿ ಹಾಗೂ ಕಟಾವಿಗೆ ಅಗತ್ಯವಿರುವ ಕೂಲಿ ಆಳುಗಳನ್ನು ಕರೆತರಲು ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು.