ವಾಡಿಕೆಗಿಂತ ಹೆಚ್ಚು ಮಳೆಯಾಗಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರೆಲ್ಲವೂ ತಮಿಳುನಾಡಿಗೆ ಹರಿದುಹೋಗುವಾಗ ತಾತ್ಸಾರ ಮನೋಭಾವದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕೈಕಟ್ಟಿ ಕುಳಿತಿರುತ್ತಾರೆ. ಅದೇ ಮಳೆಯ ಪ್ರಮಾಣ ಕುಸಿತವಾಗಿ ಬರಗಾಲದ ಛಾಯೆ ಆವರಿಸಿದಾಗ ನೀರಿನ ಲೆಕ್ಕಾಚಾರ ಹಾಕಿಕೊಂಡು ಕೂರುತ್ತಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯವಾಡಿಕೆಗಿಂತ ಹೆಚ್ಚು ಮಳೆಯಾಗಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರೆಲ್ಲವೂ ತಮಿಳುನಾಡಿಗೆ ಹರಿದುಹೋಗುವಾಗ ತಾತ್ಸಾರ ಮನೋಭಾವದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕೈಕಟ್ಟಿ ಕುಳಿತಿರುತ್ತಾರೆ. ಅದೇ ಮಳೆಯ ಪ್ರಮಾಣ ಕುಸಿತವಾಗಿ ಬರಗಾಲದ ಛಾಯೆ ಆವರಿಸಿದಾಗ ನೀರಿನ ಲೆಕ್ಕಾಚಾರ ಹಾಕಿಕೊಂಡು ಕೂರುತ್ತಾರೆ.

ಹೆಚ್ಚುವರಿ ನೀರಿನ ಬಳಕೆಗೆ ಯೋಜನೆಗಳನ್ನು ರೂಪಿಸದೆ ಬೌದ್ಧಿಕ ದಿವಾಳಿತನ ಪ್ರದರ್ಶಿಸುವ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಜಿಲ್ಲೆಯ ನೀರಿನ ದಾಹ ಇಂಗದಂತಾಗಿದೆ.ಕೃಷಿ ಮತ್ತು ಕುಡಿಯುವ ನೀರಿಗೆ ಕೃಷ್ಣರಾಜಸಾಗರ ಜಲಾಶಯ ಪ್ರಮುಖ ಆಧಾರವಾಗಿದೆ. ಅಣೆಕಟ್ಟೆಯಲ್ಲಿ ಪ್ರಸ್ತುತ ನೀರಿನ ಮಟ್ಟ ೯೦ ಅಡಿಗೆ ಕುಸಿದಿದೆ. ಜಲಾಶಯಕ್ಕೆ ಒಳಹರಿವು ಸಂಪೂರ್ಣವಾಗಿ ಕುಸಿದಿದೆ. ಕೇವಲ ೮೦ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ೧೪೬೬ ಕ್ಯುಸೆಕ್ ನೀರನ್ನು ನಾಳೆ ಮತ್ತು ಕುಡಿಯುವ ನೀರಿಗೆ ಹರಿಯಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ ೧೬.೩೯೬ ಟಿಎಂಸಿ ನೀರು ಸಂಗ್ರಹವಾಗಿದ್ದರೂ ಬಳಕೆಗೆ ಸಿಗುವ ನೀರಿನ ಪ್ರಮಾಣ ಮಾತ್ರ ೮.೦೧೭ ಟಿಎಂಸಿಯಷ್ಟಿದೆ.

ಶಾಶ್ವತ ಯೋಜನೆಗಳಿಲ್ಲ:

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಶಾಶ್ವತ ಯೋಜನೆಗಳನ್ನು ರೂಪಿಸಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ಆಸರೆ ಕಲ್ಪಿಸುವಲ್ಲಿ ಎಲ್ಲಾ ಪಕ್ಷದವರು ವಿಫಲರಾಗಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಜಿಲ್ಲೆಯ ಶೇ.೧೫ರಷ್ಟು ಜನರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಗೆ ಹೊಂದಿಕೊಂಡಿರುವ ಕೆಆರ್‌ಎಸ್ ಗ್ರಾಮದ ಜನರಿಗೇ ಕುಡಿಯುವ ನೀರು ಸಿಗುತ್ತಿಲ್ಲದಿರುವುದು ವಿಪರ್ಯಾಸ.

ಬೇಸಿಗೆ ಸಮಯದಲ್ಲಿ ನೀರಿನ ಸಂಕಷ್ಟ ಎದುರಾಗಬಹುದೆಂಬ ಅರಿವಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮೃದ್ಧ ಮಳೆಯಾದ ಸಮಯದಲ್ಲಿ ಕಣ್ಮುಚ್ಚಿ ಕುಳಿತುಕೊಳ್ಳುವುದೇಕೆ ಎನ್ನುವುದು ಅರ್ಥವಾಗುತ್ತಿಲ್ಲ. ಮಳೆ ನೀರು ಕೊಯ್ಲು ಯೋಜನೆಗಳನ್ನು ರೂಪಿಸುವ, ಅಣೆಕಟ್ಟೆಗಳು, ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಅಧಿಕ ನೀರು ಸಂಗ್ರಹಿಸುವುದರ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವುದು ಒತ್ತಟ್ಟಿಗಿರಲಿ. ಅದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡದಿರುವುದೂ ವಿಚಿತ್ರವೆನಿಸಿದರೂ ಸತ್ಯಸಂಗತಿಯಾಗಿದೆ.

೧ ಚ.ಮೀ. ವ್ಯಾಪ್ತಿಯಲ್ಲಿ ೮ ಲೀಟರ್ ನೀರು ಆವಿ:

ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಣೆಕಟ್ಟೆ ಮತ್ತು ಕೆರೆ-ಕಟ್ಟೆಗಳಲ್ಲಿ ಸಂಗ್ರಹವಾಗಿರುವ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಗಿದೆ. ದಿನವೊಂದಕ್ಕೆ ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ ೮ ಲೀಟರ್‌ನಷ್ಟು ನೀರು ಆವಿಯಾಗುತ್ತಿದೆ ಎಂದು ಹವಾಮಾನ ತಜ್ಞರು ಹೇಳುವ ಮಾತಾಗಿದೆ.

ಬೇಸಿಗೆ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ವಾತಾವರಣದಲ್ಲೂ ತಣ್ಣನೆಯ ಹವೆ ಇಲ್ಲ. ಹೀಗಾಗಿ ನೀರು ಆವಿಯಾಗುವ ಪ್ರಮಾಣವೂ ಏರಿಕೆಯಾಗುತ್ತಿದೆ. ೨೦೨೪ರಲ್ಲಿ ನೀರು ಆವಿಯಾಗುವ ಪ್ರಮಾಣ ೧ ಚದರ ಮೀಟರ್ ಪ್ರದೇಶದಲ್ಲಿ ೧೦ ಲೀಟರ್‌ಗೆ ಏರಿಕೆಯಾಗಿತ್ತು ಎಂದು ಅಂಕಿ-ಅಂಶಗಳು ತಿಳಿಸಿವೆ.

ನೀರಿದ್ದಾಗ ಸಂಗ್ರಹಕ್ಕೆ ನಿರ್ಲಕ್ಷ್ಯ:

ಸಾಮಾನ್ಯವಾಗಿ ಉತ್ತಮ ಮಳೆಯಾದ ಸಂದರ್ಭದಲ್ಲೆಲ್ಲಾ ಅಣೆಕಟ್ಟೆ ಭರ್ತಿಯಾಗಿ ಹೆಚ್ಚುವರಿ ನೀರು ನೆರೆ ರಾಜ್ಯಕ್ಕೆ ಹರಿದುಹೋಗುತ್ತಿದ್ದರೆ ನೋಡುತ್ತಾ ನಿರ್ಲಕ್ಷ್ಯ ವಹಿಸುವರೇ ವಿನಃ ನೆರೆ ರಾಜ್ಯಕ್ಕೆ ಹರಿಸಬೇಕಾದಷ್ಟು ನೀರನ್ನು ಹರಿಸಿ ಹೆಚ್ಚುವರಿ ನೀರನ್ನು ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಕಲ್ಪಿಸುವ, ಕೆರೆಗಳಲ್ಲಿ ತುಂಬಿರುವ ಹೂಳನ್ನು ತೆಗೆಸಿ ಅವುಗಳನ್ನು ವಿಸ್ತರಣೆ ಮಾಡಿಕೊಂಡು ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಯಾರೊಬ್ಬರೂ ಮುಂದಾಗದಿರುವುದು ನೀರಿನ ಬಿಕ್ಕಟ್ಟಿಗೆ ಮೂಲ ಕಾರಣವಾಗಿದೆ.

ಹೆಚ್ಚುವರಿ ನೀರಿನ ಬಳಕೆಗೆ ಕಾನೂನಿನಲ್ಲಿ ಯಾವುದೇ ಅಡ್ಡಿ ಆತಂಕಗಳೂ ಇಲ್ಲ. ಬ್ಯಾರೇಜ್‌ಗಳನ್ನು ನಿರ್ಮಿಸುವುದಕ್ಕೆ ಅವಕಾಶಗಳಿದ್ದರೂ, ಕೆರೆಗಳ ಹೂಳೆತ್ತಿಸಿ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದಾಗಿದ್ದರೂ ಯಾರೊಬ್ಬರೂ ಅತ್ತ ಗಮನವನ್ನೇ ಹರಿಸುತ್ತಿಲ್ಲ.

ಹೊಸ ಕೆರೆಗಳನ್ನು ನಿರ್ಮಿಸುವ ಮೂಲಕ ಕೆರೆಗಳಲ್ಲಿ ನೀರು ಸಂಗ್ರಹಿಸುವುದಕ್ಕೆ ಪ್ರಾಧಾನ್ಯತೆ ನೀಡಲು ಅವಕಾಶಗಳಿದ್ದರೂ ಯಾರಿಗೂ ಅದರತ್ತ ಗಮನವೂ ಇಲ್ಲ. ಶೇ.೮೫ರಷ್ಟು ಹಳ್ಳಿಗಳಿಗೆ ಕುಡಿಯುವ ನೀರು ಕೊಳವೆ ಬಾವಿಗಳಿಂದ ಪೂರೈಕೆಯಾಗುತ್ತಿರುವ ವಾಸ್ತವ ಸತ್ಯ ಅರಿತಿದ್ದರೂ ಹೆಚ್ಚುವರಿ ನೀರಿನಿಂದ ಕೆರೆಗಳಲ್ಲಿ ಸದಾಕಾಲ ನೀರಿರುವಂತೆ ನೋಡಿಕೊಳ್ಳುವ ಒಂದೇ ಒಂದು ಯೋಜನೆಯನ್ನೂ ರೂಪಿಸದೆ ಬರಗಾಲ ಎದುರಾದ ವರ್ಷಕ್ಕೆ ಸೀಮಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೈತೊಳೆದುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವುದರಿಂದ ಕುಡಿಯುವ ನೀರಿಗೆ ಶಾಶ್ವತ ಯೋಜನೆಗಳನ್ನು ರೂಪಿಸುವುದು ಜಿಲ್ಲೆಯ ಜನರ ಪಾಲಿಗೆ ಮರೀಚಿಕೆಯಾಗಿ ಉಳಿದುಕೊಂಡಿದೆ.

ಅಂತರ್ಜಲ ಉತ್ತಮ ಸ್ಥಿತಿಯಲ್ಲಿಲ್ಲ:

ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಉತ್ತಮ ಸ್ಥಿತಿಯಲ್ಲಿ ಇಲ್ಲ. ಜಿಲ್ಲೆಯಲ್ಲಿ ಒಂದು ಸಾವಿರ ಕೆರೆಗಳಿದ್ದರೂ ಎಲ್ಲದರಲ್ಲೂ ಹೂಳು ತುಂಬಿಕೊಂಡಿದೆ. ಎಲ್ಲ ಕೆರೆಗಳ ಹೂಳು ತೆಗೆಸುವುದಕ್ಕೆ ಹಣ ಖರ್ಚಾಗುತ್ತಿದೆಯೇ ವಿನಃ ಅದರಿಂದ ಜನರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಜಿಲ್ಲೆಯಲ್ಲಿ ಅಂತರ್ಜಲ 6 ರಿಂದ 8 ಮೀಟರ್‌ನಷ್ಟು ಆಳಕ್ಕೆ ಹೋಗಿದೆ. ಅಂತರ್ಜಲದ ಮಟ್ಟ ಉತ್ತಮ ಸ್ಥಿತಿಯಲ್ಲಿಡುವ ಪ್ರಯತ್ನಗಳೂ ಅಧಿಕಾರಿ ವರ್ಗದಿಂದ ನಡೆಯುತ್ತಿಲ್ಲ.

ಮಳೆ ಇಲ್ಲದೆ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಶೇ.೨೫ರಷ್ಟು ನೀರು ಮಾತ್ರ ಕೆರೆಗಳಲ್ಲಿ ಸಂಗ್ರಹವಾಗಿದೆ. ಜಿಲ್ಲೆಯ ಭಾಗಶಃ ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಒದಗಿಸಿದರೆ ಜನರಿಗೆ ಮತ್ತು ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಬಹುದಾಗಿದ್ದರೂ ಆಳುವವರಿಗೆ ಅಂತಹ ಆಲೋಚನೆಗಳೇ ಮೂಡದಿರುವುದು ದುರದೃಷ್ಟಕರ ಸಂಗತಿಯಾಗಿದೆ

ಬೇಸಿಗೆಯಲ್ಲಿ ಸರ್ಕಾರಿ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕುಂಠಿತಗೊಳ್ಳುವುದು, ಫ್ಲೋರೈಡ್‌ನಂತಹ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಮಳೆಯಿಂದ ಸಿಗಬಹುದಾದ ಹೆಚ್ಚುವರಿ ನೀರಿಗೆ ಪರ್ಯಾಯ ಯೋಜನೆಗಳಿದ್ದರೆ ಅದರಿಂದ ಅಂತರ್ಜಲ ಉತ್ತಮಗೊಂಡು ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬಹುದಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳ ಉದಾಸೀನತೆ, ಬೇಜವಾಬ್ದಾರಿತನದಿಂದ ಅವುಗಳು ಕಾರ್ಯರೂಪಕ್ಕೆ ಬಾರದಂತಾಗಿವೆ.

ತಮಿಳುನಾಡಿನವರು ಕಾನೂನುಬದ್ಧವಾಗಿ ಸಿಗಬಹುದಾದ ಕಾವೇರಿ ಹಾಗೂ ನೀರು ಹೆಚ್ಚುವರಿ ನೀರನ್ನು ಬಳಸಿಕೊಂಡು ಉಪಯುಕ್ತ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ನದಿಗಳನ್ನು ಜೋಡಿಸಿಕೊಂಡು ವ್ಯವಸಾಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. ಗಂಗಾ-ಕಾವೇರಿ ನದಿ ಜೋಡಣೆಯ ಉಪಯೋಗಕ್ಕೂ ಅವರಲ್ಲಿ ಯೋಜನೆ ತಯಾರಿದೆ. ನಮ್ಮಲ್ಲಿ ಹೆಚ್ಚುವರಿ ನೀರಿನ ಬಳಕೆಗೆ ಯೋಜನೆಗಳನ್ನೇ ರೂಪಿಸದಿರುವುದು ದುರದೃಷ್ಟಕರ.

-ಡಾ.ಬಿ.ಶಿವಲಿಂಗಯ್ಯ, ಚಿಂತಕರು

ನೀರಿನ ಸಂರಕ್ಷಣೆ, ಸಂಗ್ರಹಣೆ ಎಂಬ ಪರಿಕಲ್ಪನೆಯೇ ಹೊರಟುಹೋಗಿದೆ. ೮೦ರ ದಶಕದ ನಂತರದಲ್ಲಿ ನೀರಿನ ಸಂಗ್ರಹಣೆಗೆ ಯಾವುದೇ ಪಕ್ಷದವರೂ ಸಹ ಪ್ರಾಧಾನ್ಯತೆಯನ್ನೇ ನೀಡಿಲ್ಲ. ನೀರಿನ ಬಳಕೆ ಹಾಗೂ ಅಂತರ್ಜಲ ಕಾಯ್ದುಕೊಳ್ಳುವಲ್ಲಿ ತಮಿಳುನಾಡಿನವರು ನಮಗಿಂತಲೂ ಎಷ್ಟೋ ವರ್ಷ ಮುಂದಿದ್ದಾರೆ. ಈಗಲೂ ಆಳುವವರಲ್ಲಿ ನೀರಿನ ಬಳಕೆಯ ಬಗ್ಗೆ ಆಲೋಚನೆಗಳಿಲ್ಲ. ಇದರಿಂದ ನೀರಿಗೆ ಹಾಹಾಕಾರ ತಪ್ಪದಂತಾಗಿದೆ. ಭವಿಷ್ಯ ಆತಂಕಕಾರಿಯಾಗಿರುವಂತೆ ಕಾಣುತ್ತಿದೆ.

- ನಂದಿನಿ ಜಯರಾಂ, ರೈತ ಮುಖಂಡರು

ನೀರಿನ ಸಂರಕ್ಷಣೆ ವಿಚಾರದಲ್ಲಿ ಯಾವುದೇ ಸರ್ಕಾರಗಳಿಗೆ ಬದ್ಧತೆ ಇಲ್ಲ. ರೈತರನ್ನೊಳಗೊಂಡಂತೆ ಸಮಿತಿ ರಚನೆ ಮಾಡಿ ಕೆರೆಗಳ ರಕ್ಷಣೆಯ ಜವಾಬ್ದಾರಿ ನೀಡಬೇಕು. ಕೆರೆಗಳು ತುಂಬಿದರೆ ಸುಮಾರು ೧೦೦ ಕಿ.ಮೀ. ದೂರದವರೆಗೆ ಅಂತರ್ಜಲ ಹೆಚ್ಚುತ್ತದೆ. ಕಳೆದ ವರ್ಷ ೩೩೦ ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಯಿತು. ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಎರಡೂ ರಾಜ್ಯಗಳಿಗೆ ಇಲ್ಲವಾಯಿತು. ಮೇಕೆದಾಟು ಹಾಗೂ ಸಣ್ಣಪುಟ್ಟ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ಸಂಗ್ರಹಕ್ಕೆ ಆದ್ಯತೆ ನೀಡದಿದ್ದರೆ ಮುಂದೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ.- ಎಂ.ಲಕ್ಷ್ಮಣ್, ಸಂಚಾಲಕರು, ಕಾವೇರಿ ತಾಂತ್ರಿಕ ಸಲಹಾ ಸಮಿತಿ