ಮಾದಾರ ಚೆನ್ನಯ್ಯ ಸೇವಾ ಸಮಿತಿಯಿಂದ ಸುಧಾಕರ್‌ ಭಾವಚಿತ್ರಕ್ಕೆ ನಮನ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಚಿವ ಸುಧಾಕರ್ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಸೂರನಹಳ್ಳಿಯ ಮಾದಾರ ಚೆನ್ನಯ್ಯ ಸೇವಾ ಸಮಿತಿ ವತಿಯಿಂದ ನಮನ ಸಲ್ಲಿಸಲಾಯಿತು. ಸುಧಾಕರ್ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಮಯದಲ್ಲಿ ಪರಿಶಿಷ್ಟರ ಕಾಲೋನಿಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುತ್ತಿದ್ದರು.

ಬಡವರ ಪರವಾಗಿಯೇ ನಾನು ರಾಜಕಾರಣಕ್ಕೆ ಬಂದಿರುವುದು ಎಂದು ಯಾವುದೇ ಕಾರ್ಯಕ್ರಮ ನಿಮಿತ್ತ ಹಳ್ಳಿಗಳಿಗೆ ಹೋದರೂ ಮೊದಲು ಕಾಲೋನಿಗಳಿಗೆ ಭೇಟಿ ನೀಡಿ ಅಹವಾಲು ಆಲಿಸುತ್ತಿದ್ದರು ಎಂದು ಕಾಲೋನಿ ನಿವಾಸಿಗಳು ಸಂತಾಪ ಸೂಚಿಸಿದ್ದಾರೆ.

ಮಾದಾರ ಚೆನ್ನಯ್ಯ ಸೇವಾ ಸಮಿತಿಯಿಂದ ವೃತ್ತದ ಬಳಿ ಸುಧಾಕರ್ ಪ್ಲೆಕ್ಸ್ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ನಮಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೂರನಹಳ್ಳಿ ವಿಜಯಕುಮಾರ್, ಮಾಜಿ ಸದಸ್ಯ ವೀರಭದ್ರಪ್ಪ, ಕಾಂಗ್ರೆಸ್ ಮುಖಂಡ ಶಿವಕುಮಾರ ಸ್ವಾಮಿ, ತಿಪ್ಪೇಸ್ವಾಮಿ, ಹನುಮಂತಪ್ಪ ಸೇರಿದಂತೆ ಇತರರು ಇದ್ದರು.