ಸಚಿವ ಸುಧಾಕರ್ ಪುತ್ರ ಸುಹಾಸ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು.

ಪಂಚಭೂತಗಳಲ್ಲಿ ಸುಧಾಕರ್ ಲೀನ । ಜೈನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಶಾಸಕರಾಗಿ ಎರಡು ಬಾರಿ ಮಂತ್ರಿಗಳಾಗಿದ್ದ ಸಚಿವ ಸುಧಾಕರ್ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸೋಮವಾರ ‌ಸಂಜೆ ಸಾವಿರಾರು ಅಭಿಮಾನಿಗಳ ದುಃಖದ ಮಡುವಿನಲ್ಲಿ ಸುಧಾಕರ್ ಕಳೆಬರ ಪಂಚಭೂತಗಳಲ್ಲಿ ಲೀನವಾಯಿತು.

ಸುಧಾಕರ್ ಬದುಕಿನ ಅಂತಿಮ ವಿದಾಯದ ಘಟ್ಟಕ್ಕೆ ಸರ್ಕಾರದ ಬಹುತೇಕ ಸಚಿವರು ಸೇರಿದಂತೆ ಸ್ವತಃ ನಾಡದೊರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಇಕ್ಕಟ್ಟಾದ ಪ್ರದೇಶದಲ್ಲಿರುವ ಜೈನ ರುದ್ರಭೂಮಿಯ ಅಂಗಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಸಿಎಂ ಭಾಗವಹಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದ್ದರೂ, ಕಳ್ಳ ದಾರಿಗ಼ಳ ಮೂಲಕ ರುದ್ರಭೂಮಿಗೆ ಬಂದಿದ್ದರು. ನೂಕುನುಗ್ಗಲು ಉಂಟಾದರೂ ಮಹಿಳೆಯರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕಂಡು ಬಂದಿತು. ಸ್ವಲ್ಪ ಮುಖ ನೋಡಲು ಬಿಡಿ ಸರ್. ಕೊನೆಯದಾಗಿ ಮುಖ ನೋಡುವೆವು. ಇನ್ಮುಂದೆ ನಮ್ಮ ಸುಧಣ್ಣ ನಮಗೆ ನೋಡಲು ಸಿಗಲ್ಲ ಎಂದು ಪೋಲೀಸರಿಗೆ ಅಂಗಲಾಚುತ್ತಿರುವ ದೃಶ್ಯ ಮನಕಲುಕುವಂತಿತ್ತು. ಪೋಲೀಸರು ರಾಷ್ಟ್ರಗೀತೆಗೆ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ಮಹಿಳೆಯರು ಬಿಕ್ಕುತ್ತಿದ್ದರು. ಸ್ಥಳದಲ್ಲಿ ನಿಶ್ಯಬ್ದತೆ ಇದ್ದ ಕಾರಣ ನಮ್ಮ ಅಳು ಬೇರೆಯವರಿಗೆ ಕೇಳಬಾರದು ಎಂದು ತಮ್ಮ ಸೀರೆ ಸೆರಗನ್ನು ಬಾಯಿಗೆ ಮುಚ್ಚಿಕೊಂಡು ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಳ್ಳುತ್ತಿದ್ದರು.

ಮಹಿಳೆಯರ ಸಂಕಟಕ್ಕೆ ಮರುಗಿದ ಪೋಲೀಸರು ಪಾರ್ಥಿವ ಶರೀರದ ಮುಂದಕ್ಕೆ ಬಿಟ್ಟಾಗ ಒಮ್ಮೆಗೇ ದುಃಖದ ಕಟ್ಟೆಹೊಡೆದವರಂತೆ ರೋಧಿಸತೊಡಗಿದರು.ಕಟ್ಟಿಗೆ ಚಿತಾಗಾರದಲ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ತಕ್ಷಣ ಅಭಿಮಾನಿಗಳ ದುಃಖದ ಕಟ್ಪೆಹೊಡೆದು ಬಡವರ ಬಂಧು ಸುಧಾಕರ್ ಅಮರವಾಗಲಿ ಎಂದು ಘೋಷಣೆ ಕೂಗಿದರು‌.

*ದರ್ಶನದಲ್ಲಿ ಮಹಿಳೆಯರೆ ಹೆಚ್ಚು:

ಚಳ್ಳಕೆರೆ ಎಚ್‌ಪಿಪಿಸಿ ಕಾಲೇಜಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನದಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ಚಳ್ಳಕೆರೆ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿಗೆ ಮಾಡಿದ ಜನಸೇವೆಗಳ ಕುರಿತು ಗುಣಗಾನ ಮಾಡುತ್ತಿರುವುದು ಎಲ್ಲೆಡೆ ಕೇಳಿಬರುತ್ತಿತ್ತು.

ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಸಿಎಂ ಸಿದ್ದರಾಮಯ್ಯ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ ಪಾರ್ಥಿವ ಶರೀರವನ್ನು ವಾಹನದ ಮೂಲಕ ಪಾವಗಡ ರಸ್ತೆಯ ಜೈನ ರುದ್ರಭೂಮಿಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುತ್ತಿದ್ದರು. ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೂ ಕೆಲವು ಅಭಿಮಾನಿಗಳು ಬ್ಯಾರಿಕೇಡ್ ಗಳನ್ನು ನೂಕಿಕೊಂಡು ಅಂತ್ಯ ಸಂಸ್ಕಾರದ ಸ್ಥಳಕ್ಕೆ ಬರಲು ಪ್ರಯತ್ನಿಸಿದರು. ಸರಿಯಾಗಿ 4ಗಂಟೆಗೆ ಆಗಮಿಸಿದ ಸಿಎಂ, ಡಿಸಿಎಂ ಸೇರಿದಂತೆ ಸಂಪುಟ ಸಹದ್ಯೋಗಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. 4.35ಕ್ಕೆ ವಾಪಾಸ್ ತೆರಳಿದರು. ನಂತರ ಕುಟುಂಬದ ಸದಸ್ಯರು ತಮ್ಮ ಧರ್ಮದ ಸಂಪ್ರಾದಾಯದಂತೆ ಅಂತಿಮವಿಧಿವಿಧಾನಗಳನ್ನ ನೆರವೇರಿಸಿದರು.

ಐದು ಕಡೆ ಹೆಲಿಪ್ಯಾಡ್:

ಸಿಎಂ ಸೇರಿದಂತೆ ಸಂಪುಟದ ಸಚಿವರು ಚಳ್ಳಕೆರೆ ಸುಧಾಕರ್ ಅಂತ್ಯ ಕ್ರಿಯೆಗೆ ಬರಲು ಐದು ಕಡೆ ಹೆಲಿಪ್ಯಾಡ್ ರೆಡಿ ಮಾಡಿದ್ದರು. ಸಾಣೀಕೆರೆಯ ವೇದ ಶಾಲೆಯ ಹತ್ತಿರ ಹಾಗೂ ಚಳ್ಳಕೆರೆ ನಗರದ ಹೊರವಲಯದ ಅರಣ್ಯ ಇಲಾಖೆ ಹತ್ತಿರ ಮಾಡಲಾಗಿತ್ತು. ಶಾಸಕ ಟಿ.ರಘುಮೂರ್ತಿ ಹಾಗೂ ಚಿತ್ರದುರ್ಗ ಶಾಸಕ ಕೆ‌.ಸಿ ವೀರೇಂದ್ರ ಪಪ್ಪಿ ಸುಧಾಕರ್ ಅಂತ್ಯ ಸಂಸ್ಕಾರ ಆಗುವವರೆಗೂ ಮುತುವರ್ಜಿಯಿಂದ ಓಡಾಡಿ ಜವಾಬ್ದಾರಿಯನ್ನು ನಿಭಾಯಿಸಿದರು.