ಚಿಕ್ಕಮಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶ ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಎಸ್‌ಐಟಿ ಹಾಗೂ ಚುನಾವಣಾ ಆಯೋಗದ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಚ್.ಎಚ್. ದೇವರಾಜ್ ಆಗ್ರಹಿಸಿದರು.

ಬುಧವಾರ ಚಿಕ್ಕಮಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಮೇಲ್ನೋಟಕ್ಕೆ ಟ್ಯಾಂಪರಿಂಗ್ ಆಗಿರುವುದು ಕಂಡು ಬರುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಇದ್ದ ಚುನಾವಣಾ ಮತ ಎಣಿಕೆ ಏಜೆಂಟ್ ಹಾಗೂ ಚುನಾವ ಣಾಧಿಕಾರಿಗಳ ಸಮಕ್ಷಮದಲ್ಲಿ ಟಿ.ಡಿ.ರಾಜೇಗೌಡರ ಪರವಾಗಿ ಸಿಂಧು ಆಗಿದ್ದ 255 ಮತಗಳು 3 ವರ್ಷಗಳ ಬಳಿಕ ಮತಗಳು ಹೇಗೆ ಅಸಿಂಧು ಆಗಲು ಸಾಧ್ಯ ಎಂದು ಪ್ರಶ್ನಿಸಿದರು.

ಒಂದು ಕಟ್ಟಿನಲ್ಲಿ ಇದ್ದ 170 ಮತಗಳನ್ನು ಉದ್ದೇಶಪೂರ್ವಕವಾಗಿ ತಿದ್ದುಪಡಿ ಮಾಡಲಾಗಿದೆ. ಅವುಗಳಲ್ಲಿ ಎರೆಡೆರೆಡು ಗೆರೆ ಎಳೆದವರು ಯಾರು? ಸ್ಟ್ರಾಂಗ್‌ ರೂಂನಲ್ಲಿ ಇದ್ದ ಪೆಟ್ಟಿಗೆಗಳ ಸೀಲ್ ತೆಗೆದು ಅಕ್ರಮ ಎಸಗಿದವರು ಯಾರು? ನಾಪತ್ತೆಯಾದ ಮತಗಳು ಎಲ್ಲಿ ಹೋದವು ಎಂಬ ಸತ್ಯ ಹೊರ ಬರಬೇಕಾದರೇ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.


ಈ ಪ್ರಕರಣದಲ್ಲಿ ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದ ಅವರು, ಈಗಿನ ರಿಟರ್ನಿಂಗ್ ಅಧಿಕಾರಿಗೆ ವಕೀಲರ ಹಾಗೂ ಚುನಾವಣಾ ಆಯೋಗದ ಮೂಲಕ ಒತ್ತಡ ಹಾಕಲಾಗಿದೆ. ಜಿಲ್ಲಾಧಿಕಾರಿಗಳು ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಹಾಗೂ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ಸಲ್ಲಿಸಲಿ ಎಂದು ಒತ್ತಾಯಿಸಿದರು.

ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ನ್ಯಾಯಾಲಯದಲ್ಲಿ ಟಿ.ಡಿ.ರಾಜೇಗೌಡ ಪರವಾಗಿ ನ್ಯಾಯ ಸಿಗಲಿದೆ. ಇಡೀ ದೇಶದ ಚುನಾವಣೆ ಇತಿಹಾಸದಲ್ಲಿ ಇದೊಂದು ದೊಡ್ಡ ಕಪ್ಪುಚುಕ್ಕೆಯಾಗಿದೆ. ಜೀವರಾಜ್ ಪ್ರಕರಣ ದಲ್ಲಿ ಇಷ್ಟೊಂದು ತುರ್ತಾಗಿ ತೀರ್ಮಾನ ತಗೆದುಕೊಂಡಿರುವ ನ್ಯಾಯಾಲಯ ಗಾಯತ್ರಿ ಶಾಂತೇಗೌಡ ಪ್ರಕರಣದಲ್ಲಿ ಮೀನಾಮೇಷ ಎಣಿಸುತ್ತಿರುವುದು ಗಮನಿಸಿದರೇ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಹರ್ಷ ತಂದಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳು ಕೆಲಸ ಮಾಡಿದೆ. ದಾವಣಗೆರೆ ಮತ್ತು ಬಾಗಲಕೋಟೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಾರೆ. ಸರ್ಕಾರ ಬಿದ್ದು ಹೋಗುತ್ತದೆ ಎಂಬ ನಂಬಿಕೆಯಲ್ಲಿದ್ದರು. ಆದರೆ, ಅದು ಹುಸಿಯಾಗಿದೆ. ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಹಿರೇಗೌಜ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಎಂ.ಡಿ.ರಮೇಶ್, ಶಾರದಮ್ಮ, ಶಾಂತಕುಮಾರ್, ಕುಸುಮ ಭರತ್ ಇದ್ದರು.

---ಬಾಕ್ಸ್---

ನರಸಿಂಹರಾಜಪುರ ತಾಲೂಕಿನಲ್ಲಿ ಟಿ.ಡಿ.ರಾಜೇಗೌಡ ಅವರ ಭಾವಚಿತ್ರವಿದ್ದ ಫಲಕವನ್ನು ಬಿಜೆಪಿ ಕಾರ್ಯಕರ್ತರು ಕಿತ್ತು ಹಾಕಿದ್ದು, ಇಂತಹ ಕೃತ್ಯ ಎಸಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ ಎಚ್.ಎಚ್. ದೇವರಾಜ್, ಡಿ.ಎನ್.ಜೀವರಾಜ್ ಪರ ಕಾರ್ಯಕರ್ತರು ಇದೇ ರೀತಿ ಗೂಂಡಾಗಿರಿ ಮುಂದುವರಿಸಿದರೇ, ಜೀವರಾಜ್ ಚಿಕ್ಕಮಗಳೂರಿಗೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಜೀವರಾಜ್‌ಗೆ ಚುನಾವಣಾ ಆಯೋಗ ಸರ್ಟಿಫಿಕೇಟ್ ನೀಡಿದ್ದು ಕಾನೂನು ಬಾಹಿರ ಎಂದರು.