ಮಂಡ್ಯ:
ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಜಮೀನುಗಳಲ್ಲಿ ಕಬ್ಬಿನ ಬೆಳೆ ಒಣಗುತ್ತಿದೆ. ವರ್ಷ ಕಾಲ ಶ್ರಮಪಟ್ಟು ಬೆಳೆದ ಬೆಳೆ ನಷ್ಟವಾಗಲು ಬಿಡದೆ ಸರ್ಕಾರ ಕೂಡಲೇ ವಿಶ್ವೇಶ್ವರಯ್ಯ ನಾಲೆ ಮೂಲಕ ಒಂದು ಕಟ್ಟು ನೀರು ಹರಿಸಬೇಕು ಎಂದು ಭುವನ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎನ್.ಬಸವರಾಜು ಆಗ್ರಹಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತ ಪರ್ಯಾಯ ಬೆಳೆಗಳತ್ತ ಗಮನ ಹರಿಸಿ ಎನ್ನುತ್ತಿದೆ. ಆದರೆ, ಕಟಾವಿಗೆ ಬರುತ್ತಿರುವ ಕಬ್ಬಿನ ಬೆಳೆ ಇನ್ನೇನು ಕಾರ್ಖಾನೆಗೆ ಹೋಗುವ ಹಂತದಲ್ಲಿ ಒಣಗುತ್ತಿರುವ ಸನ್ನಿವೇಶ ಬಹಳ ನೋವು ತಂದಿದೆ. ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 91 ಅಡಿ ನೀರಿದೆ. ಈ ಹಿಂದೆ ಕೂಡ 80 ಅಡಿಗಿಂತ ಕೆಳಗಿದ್ದಾಗಲೂ ನೀರು ಹರಿಸಿದ ನಿದರ್ಶನವಿದೆ. ಹಾಗಾಗಿ ತಕ್ಷಣ ನಾಲೆಗೆ ನೀರು ಹರಿಸದಿದ್ದರೆ ಕನಿಷ್ಠ ರೈತರಿಗೆ 2 ಸಾವಿರ ಕೋಟಿ ರು. ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.ಜಿಲ್ಲೆಯಲ್ಲಿ ರೈತರು ನೀರಿನ ಕೊರತೆಯಿಂದಾಗಿ ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದಾರೆ. ಬೆಳೆದಿರುವ ಕಬ್ಬು ಸೇರಿದಂತೆ ತೆಂಗು, ಅಡಿಕೆ ಬೆಳೆ ಉಳಿಸಿಕೊಳ್ಳುವುದೂ ಕಷ್ಟಕರವಾಗಿದೆ. ಈಗಾಗಲೇ ಕೆಲವೆಡೆ ಜಮೀನುಗಳು ಒಣಗುತ್ತಿವೆ. ಶಾಸಕರು ರೈತರ ಪರ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕೆಆರ್‌ಎಸ್ ಅಣೆಕಟ್ಟೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಇದರಿಂದ ಜಿಲ್ಲೆಯ ಆರ್ಥಿಕತೆ ನಡೆದಿದೆ. ಹೀಗಾಗಿ ವಿಸಿ ನಾಲೆಯ ಕೊನೇ ಭಾಗವಾದ ಮಳವಳ್ಳಿ ತಾಲೂಕಿಗೂ ನೀರು ಒದಗಿಸಲು ಆದ್ಯತೆ ನೀಡದ ಆಡಳಿತ 140 ಕಿ.ಮೀ.ದೂರದ ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳಲು ಮುಂದಾಗಿರುವುದು ಆತಂಕಕಾರಿ. ಇದು ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲಿದೆ ಎಂದು ಬಸವರಾಜು ಎಚ್ಚರಿಸಿದ್ದಾರೆ.