ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ದರೆ ಈ ಕ್ಷಣದಿಂದಲೇ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಬೆಳೆಗಳನ್ನು ರಕ್ಷಣೆ ಮಾಡಬೇಕು. ಅಣೆಕಟ್ಟೆಯಲ್ಲಿ ನೀರಿದ್ದರೂ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸದೆ ರೈತರಿಗೆ ದ್ರೋಹ ಮಾಡಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.

ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಸಂತೆಕಸಲಗೆರೆ ಸಮೀಪ ಒಣಗುತ್ತಿರುವ ಕಬ್ಬು ಬೆಳೆಯನ್ನು ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳೆ ಒಣಗುತ್ತಿರುವುದನ್ನು ಕಂಡು ರೈತರು ಕಂಗೆಟ್ಟಿದ್ದಾರೆ. ಅಧಿಕಾರದಲ್ಲಿರುವವರು, ಇಲ್ಲದವರು ಎಲ್ಲಿದ್ದಾರೆ. ಬೆಳೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದರೂ ಸ್ಪಂದಿಸುವವರೇ ಇಲ್ಲವಾಗಿದ್ದಾರೆ ಎಂದು ಟೀಕಿಸಿದರು.

ನೀರಾವರಿಯಿಂದ ಕೂಡಿದ ಶ್ರೀರಂಗಪಟ್ಟಣ ಕ್ಷೇತ್ರದ್ದೇ ಈ ಗತಿಯಾದರೆ ಉಳಿದ ತಾಲೂಕುಗಳಲ್ಲಿ ಇನ್ನೆಂತಹ ಪರಿಸ್ಥಿತಿ ಇರಬಹುದು. ಅಣೆಕಟ್ಟೆಯಲ್ಲಿ ೮೬ ಅಡಿಯಷ್ಟು ನೀರಿದೆ. ೧೨ ಸಾವಿರ ಕ್ಯುಸೆಕ್‌ವರೆಗೆ ಒಳಹರಿವಿದೆ. ಆದರೂ ನಾಲೆಗಳಿಗೆ ನೀರು ಹರಿಸದೆ ರಾಜ್ಯ ಸರ್ಕಾರ ಭಂಡತನ ಪ್ರದರ್ಶಿಸುತ್ತಿದೆ ಎಂದು ದೂಷಿಸಿದರು.

ಸರ್ಕಾರಕ್ಕೆ ಕೃಷಿ ಬಗ್ಗೆ ಜ್ಞಾನವೇ ಇಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಬೆಳೆದು ನಿಂತ ಬೆಳೆ ಎಷ್ಟಿದೆ. ತೋಟಗಾರಿಕೆ ಬೆಳೆಗಳ ಸ್ಥಿತಿ ಏನು, ಕಬ್ಬು ಯಾವ ಪರಿಸ್ಥಿತಿಯಲ್ಲಿದೆ ಎನ್ನುವುದನ್ನು ನೋಡುತ್ತಿಲ್ಲ. ಕೃಷಿ ಸಚಿವರಾಗಿದ್ದವರು ಇದೆಲ್ಲವನ್ನೂ ನೋಡದೆ ಅವರನ್ನು ಸರ್ವನಾಶ ಮಾಡುತ್ತಿದ್ದಾರೆ. ಕಟ್ಟೆಯಲ್ಲಿರುವ ನೀರನ್ನು ಬಿಡುವ ಯೋಗ್ಯತೆ ಪ್ರದರ್ಶಿಸುತ್ತಿಲ್ಲ. ಜಿಲ್ಲೆಯಲ್ಲಿ ಕಬ್ಬು ಉರುವಲಾಗುತ್ತಿದೆ. ಶ್ರೀರಂಗಪಟ್ಟಣ ಶಾಸಕರು ಮೈಸೂರಿನ ಬಿಕಪ್ ಹೋಟೆಲ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಕುಳಿತಿದ್ದಾರೆ. ಅಧಿಕಾರವನ್ನು ಸ್ವಾರ್ಥಕ್ಕೆ, ಹಣ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ರೈತರ ಉದ್ಧಾರಕ್ಕಲ್ಲ ಎಂದು ಕಿಡಿಕಾರಿದರು.


ಕಳೆದ ಮೇ ೨೭ ರಂದು ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ನಿಲ್ಲಿಸಿದರು. ಆಗಲೇ ಕೆಆರ್‌ಎಸ್ ಗೇಟ್‌ನ ಪ್ರವೇಶದ್ವಾರದ ಕಾಮಗಾರಿ ನಡೆಸಬೇಕಿತ್ತು. ಜೂನ್ ತಿಂಗಳು ಪೂರ್ತಿ ಕಾಲಹರಣ ಮಾಡಿದ ಅಧಿಕಾರಿಗಳು ನೀರು ಬಿಡುಗಡೆ ಸಮಯದಲ್ಲಿ ಕಾಮಗಾರಿಯನ್ನು ಆರಂಭಿಸಿದ್ದಾರೆ. ಅಧಿಕಾರಿಗಳಿಗೂ ರೈತರ ಪರಿಸ್ಥಿತಿಯ ಅರಿವಿಲ್ಲ. ತಮಗಿಷ್ಟಬಂದಂತೆ ನಡೆದುಕೊಳ್ಳುತ್ತಿದ್ದು, ಅವರನ್ನು ಪ್ರಶ್ನಿಸುವವರೇ ಇಲ್ಲವಾಗಿದೆ ಎಂದು ಟೀಕಿಸಿದರು.

ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ೦ ನಿಂದ ೬೦ ಅಡಿಯವರೆಗೆ ಡೆಡ್ ಸ್ಟೋರೇಜ್, ೬೦ ರಿಂದ ೭೪ ಅಡಿಯವರೆಗೆ ಕುಡಿಯುವ ನೀರಿಗೆ ಕಾಯ್ದಿರಿಸುವುದು, ೭೪ ಅಡಿಗಿಂತ ಹೆಚ್ಚಿನ ನೀರನ್ನು ಕೃಷಿಗೆ ನೀಡಬೇಕು ಎನ್ನುವುದು ಮಹಾರಾಜರ ಕಾಲದಲ್ಲೇ ನಿರ್ಧಾರವಾಗಿದೆ. ಈಗ ೮೬ ಅಡಿ ನೀರಿದ್ದರೂ ನೀರು ಹರಿಸಲಾಗುತ್ತಿಲ್ಲವೆಂದರೆ ಏನರ್ಥ. ಸಿಡಿಎಸ್, ವಿರಿಜಾ, ಆರ್‌ಬಿಎಲ್‌ಎಲ್, ಬಂಗಾರದೊಡ್ಡಿ, ರಾಜಾ ಪರಮೇಶ್ವರಿ ನಾಲೆಗಳಿಗೆ ನೀರು ಹರಿಸಿಲ್ಲ. ಜುಲೈ ತಿಂಗಳಲ್ಲಿ ನಾಲಾ ಕಾಮಗಾರಿಯನ್ನು ಕೈಗೆತ್ತಿಕೊಂಡು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದಿಂದ ನಾಲಾ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರಿಗೆ ಕಾಲಮಿತಿಯೂ ಇಲ್ಲ, ಯಾವ ನೀತಿ-ನಿಯಮಗಳನ್ನೂ ಅನುಸರಿಸುತ್ತಿಲ್ಲ. ಅಧಿಕಾರಿಗಳಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇವರನ್ನು ಜನ ಕ್ಷಮಿಸುವುದಿಲ್ಲ. ನೀರು ಕೊಡುವಲ್ಲೂ ಅನ್ಯಾಯ ಮಾಡುತ್ತಾ ಸ್ವಾರ್ಥಪರ ಆಡಳಿತ ನಡೆಸುತ್ತಿದ್ದಾರೆ. ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ಕೆಆರ್‌ಎಸ್ ಪ್ರವೇಶ ದ್ವಾರದ ಕೆಲಸ ಮುಗಿಯಬೇಕಾದರೆ ಕನಿಷ್ಠ ಒಂದು ತಿಂಗಳಾಗಬೇಕು. ಅಲ್ಲಿಯವರೆಗೂ ಬೆಳೆ ಉಳಿಯುವುದಕ್ಕೆ ಸಾಧ್ಯವೇ. ಒಂದು ಕಟ್ಟು ನೀರನ್ನು ತತ್‌ಕ್ಷಣವೇ ಅಣೆಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ಹರಿಸಲು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಅದರಿಂದ ಉಂಟಾಗುವ ನಷ್ಟಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.