ಗೃಹಲಕ್ಷ್ಮಿ ಮೃತ ಫಲಾನುಭವಿಗಳ ತೆಗೆದುಹಾಕಿ: ಸಿದ್ದು

| Published : Sep 09 2025, 02:00 AM IST

ಗೃಹಲಕ್ಷ್ಮಿ ಮೃತ ಫಲಾನುಭವಿಗಳ ತೆಗೆದುಹಾಕಿ: ಸಿದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪೈಕಿ ಕೆಲವರು ಮರಣ ಹೊಂದಿರುವ ಮಾಹಿತಿಯಿದ್ದು, ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಪರಿಶೀಲಿಸಿ, ಪರಿಷ್ಕರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪೈಕಿ ಕೆಲವರು ಮರಣ ಹೊಂದಿರುವ ಮಾಹಿತಿಯಿದ್ದು, ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಪರಿಶೀಲಿಸಿ, ಪರಿಷ್ಕರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1.24 ಕೋಟಿ ಫಲಾನುಭವಿಗಳಿಗೆ ಮಾಸಿಕ ₹2000 ನೀಡಲಾಗುತ್ತಿದೆ. ಈ ಫಲಾನುಭವಿಗಳಲ್ಲಿ ಕೆಲವರು ಮರಣ ಹೊಂದಿರುವ ಮಾಹಿತಿಯಿದ್ದು, ಅವರ ಖಾತೆಗೂ ಹಣ ಪಾವತಿಯಾಗುತ್ತಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ, ಪರಿಷ್ಕರಿಸಬೇಕಿದೆ. ಅದಾದ ನಂತರ ಪರಿಷ್ಕರಿಸಿದ ಪಟ್ಟಿಯನ್ನು ಇಲಾಖೆ ಮತ್ತು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಸಲ್ಲಿಸಬೇಕು ಎಂದರು.

ಅರ್ಹ ಫಲಾನುಭವಿಗಳನ್ನು ಗುರುತಿಸಲು ಆಡಿಟ್‌ ನಡೆಸಬೇಕು. ಅಲ್ಲದೆ, ಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳ ಸೇರ್ಪಡೆ ಮತ್ತು ತೆಗೆದು ಹಾಕುವಿಕೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಜಿಎಸ್‌ಟಿ ಪಾವತಿಸಿದವರು ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿರುವ ಬಗ್ಗೆ ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಕುರಿತಂತೆ ಜನರಿಗೆ ಮತ್ತಷ್ಟು ಮಾಹಿತಿ ನೀಡಬೇಕು. ಅರ್ಹರು ಯೋಜನೆಗಳ ಲಾಭ ಪಡೆಯುವ ಬಗ್ಗೆ ತಿಳಿಸಬೇಕು. ಅದರ ಭಾಗವಾಗಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆಂದೋಲನ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಗುರುತಿಸಿ ಪಡಿತರ ಚೀಟಿ ರದ್ದುಗೊಳಿಸುವ ಕಾರ್ಯವನ್ನು ಮಾಡಬೇಕು ಹಾಗೂ ಅದಕ್ಕೆ ಸಂಬಂಧಿಸಿದಂತೆ ಇರುವ ಮಾನದಂಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದೂರುಗಳಿವೆ. ಅದನ್ನು ತಡೆಯಲು ಸೂಕ್ತ ಕಾರ್ಯತಂತ್ರ ರೂಪಿಸಿ ಕ್ರಮ ಕೈಗೊಳ್ಳಬೇಕು. ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಪತ್ತೆ ಮಾಡಿ ಪಡಿತ ಚೀಟಿ ರದ್ದು ಮಾಡುವುದನ್ನು ಗ್ರಾಪಂ ಮಟ್ಟದಲ್ಲಿಯೇ ನಡೆಸಬೇಕು ಎಂದು ಹೇಳಿದರು.

ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಬದಲು ಆಯಾ ಪ್ರದೇಶಕ್ಕೆ ತಕ್ಕಂತೆ ಇತರ ಧಾನ್ಯ ನೀಡುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕು. ಪ್ರಸ್ತುತ ಕೇಂದ್ರ ಸರ್ಕಾರದಿಂದ ಪ್ರತಿ ಫಲಾನುಭವಿಗಳಿಗೆ ನೀಡಲಾಗುವ 5 ಕೆಜಿ ಅಕ್ಕಿಯಲ್ಲಿ 2ರಿಂದ 3 ಕೆಜಿ ಜೋಳ ಅಥವಾ ರಾಗಿ ಸೇರಿದಂತೆ ಆಯಾ ಪ್ರದೇಶದ ಧಾನ್ಯ ವಿತರಿಸಲಾಗುತ್ತಿದೆ. ಅದೇ ರೀತಿ ರಾಜ್ಯದಿಂದಲೂ ವಿತರಿಸಲಾಗುವ 5 ಕೆಜಿ ಅಕ್ಕಿ ಬದಲಿಗೆ ಪ್ರದೇಶವಾರು ಇತರ ಧಾನ್ಯ ನೀಡಲು ಯೋಚಿಸಬೇಕು ಎಂದು ನಿರ್ದೇಶಿಸಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಕೆ.ಎಚ್‌.ಮುನಿಯಪ್ಪ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಇತರರಿದ್ದರು.

₹98 ಸಾವಿರ ಕೋಟಿ ವೆಚ್ಚ

ಐದು ಗ್ಯಾರಂಟಿ ಯೋಜನೆಗಳಿಗೆ ಈವರೆಗೆ 97,813 ಕೋಟಿ ರು. ವೆಚ್ಚ ಮಾಡಲಾಗಿದೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆ ಅಡಿ 1.24 ಕೋಟಿ ಫಲಾನುಭವಿಗಳಿಗೆ ₹50 ಸಾವಿರ ಕೋಟಿ, ಗೃಹಜ್ಯೋತಿ ಅಡಿ 1.64 ಕೋಟಿ ಫಲಾನುಭವಿಗಳಿಗೆ ₹18 ಸಾವಿರ ಕೋಟಿ, ಯುವನಿಧಿ ಅಡಿ 2.55 ಲಕ್ಷ ಫಲಾನುಭವಿಗಳಿಗೆ ₹623 ಕೋಟಿ, ಶಕ್ತಿ ಯೋಜನೆ ಅಡಿ 544 ಕೋಟಿ ಉಚಿತ ಪ್ರಯಾಣಕ್ಕೆ ₹13,903 ಕೋಟಿ ಹಾಗೂ ಅನ್ನಭಾಗ್ಯ ಅಡಿ ₹11,821 ಕೋಟಿ ರು. ವೆಚ್ಚ ಮಾಡಲಾಗಿದೆ.