ಸಾರಾಂಶ
ಮದ್ಯ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಜತೆಗೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಜತೆಗೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಾಪೂಜಿ ನಗರದ ನಿವಾಸಿ ಕೌಶಿಕ್ (25) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಚಂದನ್ ಹಾಗೂ ಮನೋಹರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಬಾಪೂಜಿ ನಗರದ ಮನೆ ಸಮೀಪ ಭಾನುವಾರ ರಾತ್ರಿ ಕೌಶಿಕ್ ಹಾಗೂ ಆತನ ಸ್ನೇಹಿತರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ಕೌಶಿಕ್ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕೋಲಾರ ಜಿಲ್ಲೆಯ ಕೌಶಿಕ್ ನಗರದಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಬಾಪೂಜಿ ನಗರದಲ್ಲಿ ನೆಲೆಸಿದ್ದ ಆತನಿಗೆ ಚಂದನ್ ಹಾಗೂ ಮನೋಹರ್ ಜತೆ ಸ್ನೇಹವಿತ್ತು. ಇದೇ ಗೆಳೆತನದಲ್ಲಿ ಆಗಾಗ್ಗೆ ಮದ್ಯ ಪಾರ್ಟಿ ಸಹ ನಡೆದಿದ್ದವು. ಅಂತೆಯೇ ಭಾನುವಾರ ರಾತ್ರಿ ಅವರು ಮದ್ಯ ಸೇವಿಸಿದ್ದಾರೆ. ಆಗ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಪರಸ್ಪರ ಬೈದಾಡಿಕೊಂಡು ಜಗಳವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.