ಪೊಲೀಸ್ ಇಲಾಖೆ ಸಭೆಯಲ್ಲಿ ಪಾಲಿಕೆಯ ಸಮಸ್ಯೆಗಳ ಅನಾವರಣ

| Published : Aug 20 2025, 01:30 AM IST

ಪೊಲೀಸ್ ಇಲಾಖೆ ಸಭೆಯಲ್ಲಿ ಪಾಲಿಕೆಯ ಸಮಸ್ಯೆಗಳ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಪಾಲಿಕೆ ವತಿಯಿಂದ ಕರೆದಿದ್ದ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಆ ವೇಳೆ ಗಣೇಶೋತ್ಸವ ಕುರಿತಂತೆ ಗಣೇಶೋತ್ಸವ ಮಂಡಳಿಗಳು ಮನವಿ, ಅಹವಾಲು ಸಲ್ಲಿಸಿದ್ದವು. ಆದರೆ, ಮಂಗಳವಾರದ ಸಭೆಯಲ್ಲಿ ಸಾರ್ವಜನಿಕರು ಮತ್ತು ಗಣೇಶೋತ್ಸವ ಮಂಡಳಿ ಸದಸ್ಯರು ಕಿಕ್ಕಿರಿದು ಸೇರಿದ್ದರು.

ಹುಬ್ಬಳ್ಳಿ: ಗೌರಿ ಗಣೇಶ ಹಬ್ಬಕ್ಕೆ ನಗರದ ಗುಂಡಿಬಿದ್ದಿರುವ ರಸ್ತೆಗಳನ್ನು ದುರಸ್ತಿ, ಮೆರವಣಿಗೆ ಸಾಗುವ ದಾರಿಯಲ್ಲಿ ಟ್ರಾಫಿಕ್ ಆಗದಂತೆ ಕ್ರಮವಹಿಸುವ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾರ್ಯವಾಗಬೇಕು.

ಹೀಗೆ ಮಂಗ‍ಳವಾರ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹು-ಧಾ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಗಣೇಶೋತ್ಸವ ಮತ್ತು ಈದ್ ಮಿಲಾದ್‌ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಅನಾವರಣವಾಯಿತು.

ಈ ಹಿಂದೆ ಪಾಲಿಕೆ ವತಿಯಿಂದ ಕರೆದಿದ್ದ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಆ ವೇಳೆ ಗಣೇಶೋತ್ಸವ ಕುರಿತಂತೆ ಗಣೇಶೋತ್ಸವ ಮಂಡಳಿಗಳು ಮನವಿ, ಅಹವಾಲು ಸಲ್ಲಿಸಿದ್ದವು. ಆದರೆ, ಮಂಗಳವಾರದ ಸಭೆಯಲ್ಲಿ ಸಾರ್ವಜನಿಕರು ಮತ್ತು ಗಣೇಶೋತ್ಸವ ಮಂಡಳಿ ಸದಸ್ಯರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಸಾರ್ವಜನಿಕರು ನಗರದಲ್ಲಿ ಪ್ರಮುಖವಾಗಿ ಗಮನಸೆಳೆದಿದ್ದು, ತಗ್ಗು- ಗುಂಡಿಗಳಿಂದ ತುಂಬಿರುವ ಮಹಾನಗರದ ರಸ್ತೆಗಳ ದುಸ್ತಿತಿಯನ್ನು.

ಸಭೆಯಲ್ಲಿ ಸಂಗೀತಾ ದೇವದಾಸ ಮಾತನಾಡಿ, ರಸ್ತೆಗಳು ಹಾಳಾಗಿವೆ. ಗಣಪತಿ ನೋಡಲು ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿ ಮಳೆಯಿಂದ ಕೆಸರು ತುಂಬಿದ್ದು, ಮರಳು ಹಾಕಿ ಕೆಸರು ಹೆಚ್ಚಾಗದಂತೆ ಕ್ರಮವಹಿಸಬೇಕು ಎಂದು ಕೋರಿದರು.

ಇದೇ ವೇಳೆ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ರಸ್ತೆಗಳು ಹಾ‍ಳಾಗಿರುವುದರಿಂದ ಮೂರ್ತಿಗಳಿಗೆ ಹಾನಿಯಾಗದಿರಲಿ. ಧಾರ್ಮಿಕ ಕಾರ್ಯದಲ್ಲಿ ಮೂರ್ತಿಗಳಿಗೆ ಹಾನಿಯಾದರೆ ಒಳಿತಲ್ಲ. ಹೀಗಾಗಿ, ರಸ್ತೆಗಳಿಂದ ಮೂರ್ತಿಗಳಿಗೆ ಮತ್ತು ವಾಹನ ಸವಾರರು, ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆಗಳ ದುರಸ್ತಿ ಮಾಡುವಂತೆ ವೇದಿಕೆಯಲ್ಲಿದ್ದವರ ಗಮನ ಸೆಳೆದರು.

ಪ್ರತಿವರ್ಷ ಹಬ್ಬಗಳು ಬಂದಾಗಲೇ ರಸ್ತೆ ದುರಸ್ತಿ ಮಾಡುವ ಗಡಿಬಿಡಿ ಯಾಕೆ? ಹಬ್ಬಗಳು ಬರುವ ಮೊದಲೇ ಇದಕ್ಕೆ ಸಿದ್ಧತೆ ಮಾಡಿ, ರಸ್ತೆ ದುರಸ್ತಿ ಮೂಲಸೌಕರ್ಯ ಕಲ್ಪಿಸಲು ಪಾಲಿಕೆ ಯಾಕೆ ಮುಂದಾಗುತ್ತಿಲ್ಲ. ಗಣೇಶೋತ್ಸವ ವೇಳೆ ಪ್ರತಿ ವರ್ಷ ಹೀಗಾಗುತ್ತದೆ. ಮಹಾನಗರ ಪಾಲಿಕೆ ಆಯುಕ್ತರೂ ಸಭೆಯಲ್ಲಿ ಭಾಗವಹಿಸಿದ್ದರೆ ಉತ್ತಮವಾಗುತ್ತಿತ್ತು. ಪೊಲೀಸ್‌ ಇಲಾಖೆ ಅವರನ್ನೂ ಸಭೆಗೆ ಆಹ್ವಾನಿಸಿದ್ದರೆ ಉತ್ತಮವಾಗುತ್ತಿತ್ತು. ಅವರಿಗೂ ಸಮಸ್ಯೆಗಳ ದರ್ಶನವಾಗುತ್ತಿತ್ತು ಎಂದು ಬಹುತೇಕ ಸಭಿಕರು ಮಹಾನಗರ ಪಾಲಿಕೆ ಕಾರ್ಯವೈಖರಿಯನ್ನು ವಾಗ್ಝರಿ ಮೂಲಕ ಕುಟುಕಿದರು.

ಈ ವೇಳೆ ಮೂರುಸಾವಿರ ಮಠದ ಶ್ರೀ ಗುರುರಾಜಯೋಗಿಂದ್ರ ಶ್ರೀಗ‍ಳು ಮಾತನಾಡಿ, ರಸ್ತೆ ಸುಧಾರಣೆ ಮಹಾನಗರ ಪಾಲಿಕೆ ಮತ್ತು ಪಾಲಿಕೆ ಸದಸ್ಯರ ಕೆಲಸ. ಅದನ್ನು ಅವರು ಮುತುವರ್ಜಿ ಮಾಡಲಿ ಎಂದರು.

ಇಷ್ಟೆಲ್ಲದರ ಮಧ್ಯೆಯೂ ಸಭಿಕರಲ್ಲಿ ಇನ್ನೂ ಕೆಲವರು ಪಾಲಿಕೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಪಟ್ಟಿ ಮಾಡುವುದರಲ್ಲೇ ತೊಡಗಿದ್ದರು. ಈ ವೇಳೆ, ಕೆಲ ಸಭಿಕರು ಇನ್ನೊಮ್ಮೆ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆಯಲಿ ಎಂದು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೂ ಆಯಿತು.

ಕೊನೆಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಪೊಲೀಸ್ ಇಲಾಖೆ ಹೊರತುಪಡಿಸಿ ಸಾರ್ವಜನಿಕರು ನೀಡಿರುವ ಸಲಹೆಗಳನ್ನು ವರದಿ ಮಾಡಿಕೊಂಡಿದ್ದು, ಅವುಗ‍ಳನ್ನು ಆಯಾ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.