ಸಾರಾಂಶ
ಈ ಬಗ್ಗೆ ಸಚಿತ್ರವಾದ ವರದಿಯು ಪತ್ರಿಕೆಯಲ್ಲಿ ಪ್ರಕಟವಾದ ಬೆನ್ನಿಗೆ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳು ಕೆಸರು ತುಂಬಿದ ರಸ್ತೆಗೆ ಜಲ್ಲಿ ಡಾಮರ್ ಮಿಶ್ರಿಣವನ್ನು ಹಾಕಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಸಂಪೂರ್ಣ ಕೆಸರುಗದ್ದೆಯಾಗಿ, ನಡೆದಾಡಲೂ ಕಷ್ಟಕರವಾಗಿದ್ದ ೩೪ ನೆಕ್ಕಿಲಾಡಿಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಸರ್ವೀಸ್ ರಸ್ತೆಯ ಅವ್ಯವಸ್ಥೆ ಕುರಿತಾದ ಪತ್ರಿಕಾ ವರದಿಯ ಬೆನ್ನೆಲ್ಲೇ ಎಚ್ಚೆತ್ತ ಅಧಿಕಾರಿಗಳು, ತ್ವರಿತ ಸ್ಪಂದನೆ ತೋರಿದ್ದಾರೆ. ಕೆಸರುಗದ್ದೆಯಂತಾಗಿದ್ದ ರಸ್ತೆಗೆ ಜಲ್ಲಿ ಡಾಮರ್ ಮಿಶ್ರಣವನ್ನು ಹಾಕಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ ೩೪-ನೆಕ್ಕಿಲಾಡಿ ಪೇಟೆಯಲ್ಲಿ ರಾಘವೇಂದ್ರ ಮಠ ಸಮೀಪದಿಂದ ಕೊಡಿಪ್ಪಾಡಿ ತನಕ ಸುಮಾರು ೧ ಕಿ.ಮೀ. ಮಣ್ಣು ಹಾಕಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿರಲಿಲ್ಲ. ಒಂದಿಷ್ಟು ಜಾಗದಲ್ಲಿ ಚರಂಡಿ ಇದ್ದರೂ ಅದು ರಸ್ತೆಯಿಂದ ಎತ್ತರದಲ್ಲಿತ್ತು. ಮತ್ತೊಂದಿಷ್ಟು ಕಡೆಯಲ್ಲಿ ಚರಂಡಿ ನಿರ್ಮಿಸಿದ್ದರೂ ಅದನ್ನು ಅಪೂರ್ಣ ಸ್ಥಿತಿಯಲ್ಲಿ ಬಿಡಲಾಗಿತ್ತು. ಹೀಗಾಗಿ ಮಳೆ ನೀರು ರಸ್ತೆಯಲ್ಲೇ ನಿಂತು ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿತ್ತು. ಇದರಿಂದಾಗಿ ಪರಿಸರದ ನಿವಾಸಿಗರು ನಿತ್ಯ ಸಮಸ್ಯೆಗೆ ಸಿಲುಕಿದ್ದರು.
ಈ ಬಗ್ಗೆ ಸಚಿತ್ರವಾದ ವರದಿಯು ಪತ್ರಿಕೆಯಲ್ಲಿ ಪ್ರಕಟವಾದ ಬೆನ್ನಿಗೆ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳು ಕೆಸರು ತುಂಬಿದ ರಸ್ತೆಗೆ ಜಲ್ಲಿ ಡಾಮರ್ ಮಿಶ್ರಿಣವನ್ನು ಹಾಕಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.