ಸಾರಾಂಶ
ನೇರವೇತನ, ನೇರನೇಮಕಾತಿ ಮೊದಲ ಹಂತದ 134 ಪೌರ ಕಾರ್ಮಿಕ ಹುದ್ದೆಗಳಿಗೆ ಬುಧವಾರ ಅಂತಿಮ ಪಟ್ಟಿ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ.
ಹುಬ್ಬಳ್ಳಿ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಟಿಪ್ಪರ್ ಚಾಲಕರು ಮತ್ತು ಲೋಡರ್‌ಗಳು ಶಾಸಕ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯಗೆ ಮನವಿ ಸಲ್ಲಿಸಿದರು.ಪಾಲಿಕೆಯಲ್ಲಿ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ 134 ಪೌರ ಕಾರ್ಮಿಕರ ನೇರನೇಮಕಾತಿ, ಪೌರ ಕಾರ್ಮಿಕರ ಮೃತಪಟ್ಟ ಕುಟುಂಬಕ್ಕೆ ಅನುಕಂಪದ ನೇಮಕಾತಿ ಹಾಗೂ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕರು, ನೇರವೇತನ, ನೇರನೇಮಕಾತಿ ಮೊದಲ ಹಂತದ 134 ಪೌರ ಕಾರ್ಮಿಕ ಹುದ್ದೆಗಳಿಗೆ ಬುಧವಾರ ಅಂತಿಮ ಪಟ್ಟಿ ಬಿಡುಗಡೆ ಮಾಡುವಂತೆ ಸೂಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶೀಘ್ರದಲ್ಲಿಯೇ ನೇಮಕಾತಿ ಪತ್ರ ವಿತರಿಸುವುದಾಗಿ ಭರವಸೆ ನೀಡಿದರು.ಎರಡನೇ ಹಂತದ 157 ಹುದ್ದೆಗಳಿಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಬೇಕು. 3 ತಿಂಗಳ ಒಳಗಾಗಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಬೇಕು. 3ನೇ ಹಂತದಲ್ಲಿ 252 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತರಿಗೆ ಈಗಾಗಲೇ ಸೂಚಿಸಲಾಗಿದೆ. ಸರ್ಕಾರದಿಂದ ಅವಶ್ಯಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪಾಲಿಕೆ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಬೆಳದಡಿ, ಚಂದ್ರು ಶಿರಗುಂಪಿ, ಸೋಮ ಬೊರಬದ, ನಾಗರಾಜ ಹೊಸಮನಿ, ಶಿವಮೂರ್ತಿ ನಾಯಕಲ್, ಮುತ್ತುರಾಜ ಕೆಲೂರ, ಚಂದ್ರು ಕನೇಕಲ, ಮಲ್ಲಿಕಾರ್ಜುನ ಬಿಜವಾಡ, ಮಹಾದೇವ ಮೊರಬದ, ಈಶ್ವರ ಹೊಸಮನಿ, ಶರಣಪ್ಪ ಅಮರಾವತಿ, ದೇವರಾಜ ನಿಡಗುಂದಿ ಸೇರಿದಂತೆ ಹಲವರಿದ್ದರು.