ಸಾರಾಂಶ
ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋಲು ಅನುಭವಿಸಿ, ಐದನೇ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಸೋಮವಾರ ನಗರದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಕಲಿಕಾ ಸ್ಫೂರ್ತಿ ತರಬೇತಿ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.ಸೋಲಾಯಿತು ಎಂದು ಅಂಜಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಆದರೆ, ಸಮಯ ಹಾಳು ಮಾಡಿಕೊಂಡು ಸೋತರೆ ನಮಗೆ ನಾವೇ ಹೊಣೆ. ನಮ್ಮ ಸಮಯ ಸದ್ಬಳಕೆ ಮಾಡಿಕೊಂಡು ಸಾಧನೆ ತೋರಬೇಕು. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ನಮ್ಮ ಗುರಿ ತಲುಪಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದೇಹದ ಆರೋಗ್ಯದ ಜತೆಗೆ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ ಮಾತನಾಡಿ, ದಸರಾ ರಜೆಯಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ತನಕದ ಅಭ್ಯಾಸ ಗಟ್ಟಿಗೊಳಿಸಲು ೪ ದಿನದ ತರಬೇತಿ ಕಲಿಕಾ ಸ್ಫೂರ್ತಿ ಶಿಬಿರ ಆಯೋಜಿಸಲಾಗಿದೆ ಎಂದರು.ಶಿರಸಿ ಶೈಕ್ಷಣಿಕಾ ಜಿಲ್ಲಾ ಉಪನಿರ್ದೇಶಕ ಪಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಐಐಟಿ ಸಂತೋಷ ಹೆಗಡೆ ಇದ್ದರು. ಮಾನ್ಯ ಹೆಗಡೆ ಪ್ರಾರ್ಥಿಸಿದಳು. ಡಯಟ್ ಉಪನ್ಯಾಸಕ ನಾರಾಯಣ ಭಾಗವತ್ ನಿರೂಪಿಸಿದರು. ಕೆ.ಎಚ್. ಶ್ರೀಧರ ವಂದಿಸಿದರು.
ಹಳಿಯಾಳ ಕ್ರೀಡಾ ವಸತಿನಿಲಯದ ಕುಸ್ತಿಪಟುಗಳ ಸಾಧನೆಹಳಿಯಾಳ: ಮೈಸೂರಿನಲ್ಲಿ ಆರಂಭಗೊಂಡಿರುವ ರಾಜ್ಯ ಮಟ್ಟದ ದಸರಾ ಕುಸ್ತಿಯಲ್ಲಿ ಹಳಿಯಾಳದ ಕ್ರೀಡಾ ವಸತಿನಿಲಯದ ಪುರುಷ ಹಾಗೂ ಮಹಿಳಾ ಕುಸ್ತಿಪಟುಗಳು 8 ಚಿನ್ನ ಹಾಗೂ 3 ಬೆಳ್ಳಿ ಮತ್ತು 2 ಕಂಚು ಪದಕವನ್ನು ಬಾಚಿಕೊಂಡಿದ್ದು, ಮಹಿಳೆಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಪುರುಷರ ವಿಭಾಗ: 61 ಕೆಜಿ ವಿಭಾಗದಲ್ಲಿ ರೋಹನ್ ದೊಡ್ಮನಿ ಪ್ರಥಮ, 87 ಕೆಜಿ ವಿಭಾಗದಲ್ಲಿ ವಿಜಯ್ ಬಂಗ್ಯಾಣ್ಣನವರ ದ್ವಿತೀಯ, 60 ಕೆಜಿ ವಿಭಾಗದಲ್ಲಿ ಜ್ಞಾನೇಶ್ವರ ಹಳದುಕರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಮಹಿಳೆಯರ ವಿಭಾಗ: 50 ಕೆಜಿ ವಿಭಾಗದಲ್ಲಿ ರಾಧಿಕಾ ಬಸ್ತ್ವಾಡಕರ ಪ್ರಥಮ, 57 ಕೆಜಿ ವಿಭಾಗದಲ್ಲಿ ಗಾಯತ್ರಿ ಸುತಾರ ಪ್ರಥಮ, 59 ಕೆಜಿ ವಿಭಾಗದಲ್ಲಿ ಶಾಲಿನಾ ಸಿದ್ದಿ ಪ್ರಥಮ, 62 ಕೆಜಿ ವಿಭಾಗದಲ್ಲಿ ಲಕ್ಷ್ಮೀ ಪಾಟೀಲ ಪ್ರಥಮ, 65 ಕೆಜಿ ವಿಭಾಗದಲ್ಲಿ ಪ್ರಿನ್ಸಿಟಾ ಸಿದ್ದಿ ಪ್ರಥಮ, 72 ಕೆಜಿ ವಿಭಾಗದಲ್ಲಿ ಪ್ರತೀಕ್ಷಾ ಭೋವಿ ಪ್ರಥಮ, 76 ಕೆಜಿ ವಿಭಾಗದಲ್ಲಿ ಮನಿಷಾ ಸಿದ್ದಿ ಪ್ರಥಮ, 62 ಕೆಜಿ ವಿಭಾಗದಲ್ಲಿ ಭುವನೇಶ್ವರಿ ಗದಗ ದ್ವಿತೀಯ, 55 ಕೆಜಿ ವಿಭಾಗದಲ್ಲಿ ಕಾವ್ಯ ದಾನವೆನ್ನನವರ್ ತೃತೀಯ, 53 ಕೆಜಿ ವಿಭಾಗದಲ್ಲಿ ಕಾವೇರಿ ತಳಗೇರಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಉತ್ತರಕನ್ನಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ ನಾಯಕ್ ತಿಳಿಸಿದ್ದಾರೆ.