ಸಹಕಾರ ಸಂಘಗಳಲ್ಲಿ ಅಧ್ಯಕ್ಷ ಸ್ಥಾನಕ್ಕಷ್ಟೇ ಮೀಸಲು

| Published : Aug 08 2025, 01:01 AM IST

ಸಹಕಾರ ಸಂಘಗಳಲ್ಲಿ ಅಧ್ಯಕ್ಷ ಸ್ಥಾನಕ್ಕಷ್ಟೇ ಮೀಸಲು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ-2024 ಹಾಗೂ ಸೌಹಾರ್ದ ಸಂಘಗಳ ತಿದ್ದುಪಡಿ ವಿಧೇಯಕಗಳಿಗೆ ರಾಜ್ಯಪಾಲರ ಸಲಹೆ ಮೇರೆಗೆ ಕೆಲ ಬದಲಾವಣೆ ಮಾಡಲು ಸಚಿವ ಸಂಪುಟ ನಿರ್ಧರಿಸಿದ್ದು, ಒಟ್ಟು ಹದಿನೇಳು ವಿಧೇಯಕಗಳನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ-2024 ಹಾಗೂ ಸೌಹಾರ್ದ ಸಂಘಗಳ ತಿದ್ದುಪಡಿ ವಿಧೇಯಕಗಳಿಗೆ ರಾಜ್ಯಪಾಲರ ಸಲಹೆ ಮೇರೆಗೆ ಕೆಲ ಬದಲಾವಣೆ ಮಾಡಲು ಸಚಿವ ಸಂಪುಟ ನಿರ್ಧರಿಸಿದ್ದು, ಒಟ್ಟು ಹದಿನೇಳು ವಿಧೇಯಕಗಳನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.

ಸಹಕಾರ ಸಂಘಗಳಿಗೆ ಮೀಸಲು ಆಧಾರಿತವಾಗಿ ರಾಜ್ಯ ಸರ್ಕಾರದಿಂದ ಮೂವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲು ಅವಕಾಶ ನೀಡುವ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ- 2024 ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳನ್ನು ರಾಜ್ಯಪಾಲರು ಸತತ ಎರಡು ಬಾರಿ ತಿರಸ್ಕರಿಸಿದ್ದರು. ಅಲ್ಲದೆ, ವಿಧೇಯಕಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದಿಂದ ಮೂವರನ್ನು ಮೀಸಲು ಆಧಾರದ ಮೇಲೆ ನೇಮಿಸುವ ನಿಯಮ ಕೈಬಿಡಲಾಗಿದೆ. ಬದಲಿಗೆ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಮೀಸಲಾತಿ ನಿಗದಿ ಮಾಡಲಾಗಿದೆ.

ದೇವದಾಸಿ ಮಗುವಿಗೆ ಪಿತೃತ್ವ ಹಕ್ಕು:

ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ, ದೇವದಾಸಿಗೆ ಜನಿಸಿದ ಮಗುವಿಗೆ ತನ್ನ ತಂದೆಯ ಗುರುತಿಸಲು (ಪಿತೃತ್ವ ಹಕ್ಕು) ಹಾಗೂ ಸಮಗ್ರ ಪುನರ್‌ವಸತಿ ಕಲ್ಪಿಸಲು ಅವಕಾಶ ನೀಡುವ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವ, ನಿಷೇಧ, ಪರಿಹಾರ ಮತ್ತು ಪುನರ್‌ವಸತಿ) ವಿಧೇಯಕ- 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಬಗ್ಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ದೇವದಾಸಿಯ ಮಗನಿಗೆ ತನ್ನ ಹೆಸರು, ಉಪನಾಮ ಅಥವಾ ತಾಯಿಯ ಹೆಸರನ್ನು ತಂದೆಯ ಕಲಂನಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಜೈವಿಕ ತಂದೆಯನ್ನು ಗುರುತಿಸುವ ಅವಕಾಶವನ್ನೂ ಸಹ ಕಾಯ್ದೆಯಲ್ಲಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಅಲ್ಪಸಂಖ್ಯಾತ ಸಂಸ್ಥೆಗಳ ಮಾನ್ಯತೆ ಷರತ್ತು ಸಡಿಲ:

ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು ಕನಿಷ್ಠ 50 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತನ್ನು ತೆಗೆಯುವ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತು ಕಾಲೇಜು ಶಿಕ್ಷಣ ತಿದ್ದುಪಡಿ ನಿಯಮಗಳು -2025, ಕರ್ನಾಟಕ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು ತಾಂತ್ರಿಕ ಶಿಕ್ಷಣ) ತಿದ್ದುಪಡಿ ನಿಯಮಗಳು-2025 ವಿಧೇಯಕಗಳಿಗೆ ಗುರುವಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ- 2025ಕ್ಕೆ ಅನುಮೋದನೆ ನೀಡಿದ್ದು, ಕುಟುಂಬ ಸದಸ್ಯರು ಎಂಬ ವ್ಯಾಖ್ಯಾನದಲ್ಲಿ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಎಂಬ ಪದಗಳ ನಂತರ ವಿವಾಹಿತ ಮಗಳೆಂಬ ಪದಗಳನ್ನು ಸೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಬಾಕ್ಸ್-

ರೋಹಿತ್‌ ವೇಮುಲ ವಿಧೇಯಕ ಮುಂದೂಡಿಕೆ

ಕಾಲೇಜುಗಳಲ್ಲಿ ಜಾತಿ ಹೆಸರಿನಲ್ಲಿ ತಾರತಮ್ಯ, ಶೋಷಣೆ ಮಾಡುವುದನ್ನು ತಡೆಯಲು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಲಾಗಿದ್ದ ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ-2025 ವನ್ನು ಮುಂದೂಡಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ರಚನೆ, ಆಯುಕ್ತರ ನೇಮಕಾತಿ, ಅಧಿಕಾರ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಶಾಸನಬದ್ಧ ಅವಕಾಶವನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ರಚನೆಯಿಂದ ನಗರಾಭಿವೃದ್ಧಿ ಪ್ರಾಧಿಕಾರಗಳ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣವನ್ನು ಆಯುಕ್ತಾಲಯದ ವ್ಯಾಪ್ತಿಗೆ ಒಳಪಡಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ಕ್ಕೆ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024ಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರೋಹಿತ್‌ ವೇಮುಲ ವಿಧೇಯಕ ಜಾರಿ ಮಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಗುರುವಾರದ ಸಂಪುಟದಲ್ಲಿ ಮಂಡಿಸಿತ್ತು. ಆದರೆ ಸೂಕ್ತ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಮುಂದೂಡಿರುವುದಾಗಿ ತಿಳಿದು ಬಂದಿದೆ.ಬಿಸಿ ಹಾಸ್ಟೆಲ್‌ಗಳಿಗೆ ಮಂಚ, ಹಾಸಿಗೆ ಖರೀದಿಸಲು ₹40 ಕೋಟಿ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ವಿದ್ಯಾರ್ಥಿ ನಿಲಯಗಳಿಗೆ 40 ಕೋಟಿ ರು. ವೆಚ್ಚದಲ್ಲಿ ತಲಾ 15,000 ಟೂ ಟಯರ್‌ ಕಾಟ್ (ಮಂಚ) ಹಾಗೂ ಕಾಯಿರ್‌ ಮ್ಯಾಟ್ರಸ್‌ (ತೆಂಗಿನ ನಾರಿನ ಹಾಸಿಗೆ) ಖರೀದಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದೇ ವೇಳೆ ಹಿಂದುಳಿದ ವರ್ಗಗಳಿಗೆ ಸೇರಿದ ನಿರುದ್ಯೋಗಿಗಳಿಗೆ 33.09 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ 1,103 ವಿದ್ಯುತ್‌ ಚಾಲಿತ ನಾಲ್ಕು ಚಕ್ರಗಳ ಆಹಾರ ಕಿಯೋಸ್ಕ್‌ ವಾಹನಗಳನ್ನು ಖರೀದಿಸಿ ವಿತರಿಸಲು ತೀರ್ಮಾನಿಸಲಾಗಿದೆ.

ಉಳಿದಂತೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವರದಾ ನದಿಯಿಂದ ನರೇಗಲ್ ಹಾಗೂ ಕುಸನೂರ ಏತ ನೀರಾವರಿ ಮುಖಾಂತರ 111 ಕೆರೆ ತುಂಬಿಸುವ ಯೋಜನೆಯನ್ನು 220 ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಬಾಗಲಕೋಟೆ ತಾಲೂಕಿನ ಸೊಕನಾದಗಿ ಗ್ರಾಮ ಮತ್ತು ಸುತ್ತಮುತ್ತಲಿನ 588 ಹೆಕ್ಟೇರ್ ಕ್ಷೇತ್ರಕ್ಕೆ 17 ಕೋಟಿ ರು. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯ, ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 33.78 ಕೋಟಿ ರು. ವೆಚ್ಚದಲ್ಲಿ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ ರಚನೆ:

ಕಾರ್ಮಿಕ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆಗಳು ಇಲಾಖೆಯನ್ನು ಇಎಸ್‌ಐಸಿ ಮಾರ್ಗಸೂಚಿ ಅನ್ವಯ ಸೊಸೈಟಿ ನೋಂದಣಿ ಕಾಯ್ದೆ -1860 ಅಡಿಯಲ್ಲಿ ನೋಂದಾಯಿಸಿ ‘ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ’ ರೂಪಿಸಲು ನಿರ್ಧಾರ ಮಾಡಲಾಗಿದೆ.====

ಇತರೆ ತೀರ್ಮಾನಗಳು:

- ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿರುವ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು 91.25 ಕೋಟಿ ರು. ವೆಚ್ಚದಲ್ಲಿ 200 ಸಾಮರ್ಥ್ಯದ ಆಸ್ಪತ್ರೆಯಾಗಿ ಉನ್ನತೀಕರಣ.

- ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 36 ಕೋಟಿ ರು. ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆ.

- ರಾಜ್ಯದ 15 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 15 ಮಹಿಳಾ ಕಾಲೇಜು ಕಟ್ಟಡಗಳ ನಿರ್ಮಾಣದ ₹87.60 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

-90 ಕೋಟಿ ರು. ವೆಚ್ಚದಲ್ಲಿ ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ಅದರಡಿ ಬರುವ ವಿತರಣಾ ನಾಲೆಗಳ ಆಧುನೀಕರಣ.

- 49.85 ಕೋಟಿ ರು. ವೆಚ್ಚದಲ್ಲಿ ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಅಣೆಕಟ್ಟು ನಾಲೆ ಮತ್ತು ವಡಕಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ.ಮತದಾರರ ಪಟ್ಟಿ ಬಳಸಿ ಡಿಜಿಟಲ್‌ ಜಾತಿ ಗಣತಿ:ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಡಿಜಿಟಲ್‌ ಸಮೀಕ್ಷೆ ನಡೆಸಲು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದು, ಲಭ್ಯವಿರುವ ಮತದಾರರ ಪಟ್ಟಿಯನ್ನೇ ಸಮೀಕ್ಷೆಗಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಸೆ.22ರಿಂದ ಮತ್ತೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು.

ಈ ವೇಳೆ ಸಮೀಕ್ಷೆಯನ್ನು ಡಿಜಿಟಲ್ ರೂಪದಲ್ಲಿ ಕೈಗೊಳ್ಳುವುದು. ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ಅಗತ್ಯವಿರುವ ತಂತ್ರಾಂಶ, ಆ್ಯಪ್‌ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲು ಸಹ ನಿರ್ಧರಿಸಲಾಗಿದೆ.ಇದೇ ವೇಳೆ ಸಮೀಕ್ಷೆಗೆ ಆರ್ಥಿಕ ಇಲಾಖೆ 624 ಕೋಟಿ ರು. ವೆಚ್ಚಕ್ಕೆ ಅನುಮೋದನೆ ನೀಡಿರುವುದನ್ನು ಸಭೆ ಗಮನಕ್ಕೆ ತರಲಾಯಿತು. ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆಯೋಗದ ಮೇಲುಸ್ತುವಾರಿಯಲ್ಲಿ ಅಗತ್ಯವಿರುವ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಕೆಲಸ ಮಾಡಲು ಸಚಿವ ಸಂಪುಟ ನಿರ್ಧರಿಸಿತು.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ನ್ಯಾ. ನಾಗಮೋಹನ್‌ದಾಸ್‌ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸುವ ವೇಳೆ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಿತ್ತು. ಅದೇ ರೀತಿ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ನಡೆಸಲು ಮತದಾರರ ಪಟ್ಟಿ ಬಳಸಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ಹೇಳಿದರು.ಮತದಾರರ ಪಟ್ಟಿ ಪರಿಶೀಲಿಸಿ ಬಳಕೆ:

ಈ ವೇಳೆ ಲೋಕಸಭೆ ವೇಳೆ ಸಿದ್ಧಪಡಿಸಿದ್ದ ಮತದಾರರ ಪಟ್ಟಿ ಬಗ್ಗೆ ನಿಮ್ಮ ನಾಯಕರೇ ಆಕ್ಷೇಪ ಎತ್ತಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್.ಕೆ. ಪಾಟೀಲ್‌, ನಮ್ಮ ನಾಯಕರು ಪ್ರಶ್ನೆ ಎತ್ತಿರುವುದು ನಿಜ. ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿ ಪರಿಶೀಲಿಸಿ ಸಮಸ್ಯೆಯಿದ್ದರೆ ತಿದ್ದುಪಡಿ ಮಾಡಲಿದ್ದಾರೆ. ಬಳಿಕವೇ ಸಮೀಕ್ಷೆಗೆ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಬಾಕ್ಸ್...ಮರು ಸಮೀಕ್ಷೆ ಏಕೆ?

2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾಂತರಾಜು ನೇತೃತ್ವದ ಆಯೋಗ ರಚಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗವು 2024ರಲ್ಲಿ ಅಂತಿಮ ವರದಿ ಸಲ್ಲಿಸಿತ್ತು.ಆದರೆ, ಸಮೀಕ್ಷೆ ಮಾಡಿ ಹತ್ತು ವರ್ಷಗಳು ಕಳೆದಿದೆ. ಹತ್ತು ವರ್ಷಗಳಾದ ನಂತರ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಸೆಕ್ಷನ್ 11(1) ರಲ್ಲಿ ಹೇಳಲಾಗಿದೆ. ಹೀಗಾಗಿ ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಏ.17 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಸಂಬಂಧ ಮಧುಸೂದನ್‌ ನಾಯ್ಕ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.