ಸಾರಾಂಶ
ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಬೆಂಗಳೂರು : ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಸಮಾವೇಶದ ನಂತರ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಮತಗಳ್ಳತನದ ಕುರಿತಂತೆ ದಾಖಲೆಸಹಿತ ದೂರು ನೀಡಲಿದ್ದಾರೆ.
ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದ್ದು, ಮತಗಳವಿಗೆ ನೆರವು ನೀಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದರು. ಅದರ ಕುರಿತು ಜನಾಂದೋಲನ ಸೃಷ್ಟಿಯಾಗುವಂತೆ ಮಾಡಲು ಕಾಂಗ್ರೆಸ್ ಶುಕ್ರವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಸಮಾವೇಶದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ದೇಶದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಟನಾ ಸಮಾವೇಶಕ್ಕಾಗಿ ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ತಳ ಮಹಡಿಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಜತೆಗೆ ಸಾರ್ವಜನಿಕರಿಗಾಗಿ 8 ಸಾವಿರ ಆಸನಗಳನ್ನು ಅಳವಡಿಸಲಾಗಿದೆ. ಅದರ ಜತೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿಯೂ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ವೇದಿಕೆ ಕಾರ್ಯಕ್ರಮ ವೀಕ್ಷಣೆಗಾಗಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನಾ ಸಮಾವೇಶವನ್ನು ಯಶಸ್ವಿಗೊಳಿಸಲು ಬೆಂಗಳೂರಿನಲ್ಲಿಯೇ ಮೊಕ್ಕಾಂ ಹೂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ನಾಯಕರೊಂದಿಗೆ ಗುರುವಾರವೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು.
ಬೆಳಗ್ಗೆ 10.30ಕ್ಕೆ ರಾಹುಲ್ ಗಾಂಧಿ:
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದು, 10.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಅದಾದ ನಂತರ ನೇರವಾಗಿ ಸ್ವಾತಂತ್ರ್ಯ ಉದ್ಯಾನದ ಪ್ರತಿಭಟನಾ ಸಮಾವೇಶದ ಸ್ಥಳಕ್ಕಾಗಮಿಸಲಿದ್ದಾರೆ.
ಇನ್ನು, ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಅಕ್ರಮ ಮತ್ತು ಮತಗಳುವಿನ ಕುರಿತು ವಿವರಗಳನ್ನು ನೀಡಲಿದ್ದಾರೆ. ಅದರಲ್ಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಕಲಿ ಮತದಾರರು, ಮತ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪ ಸೇರಿದಂತೆ ಹಲವು ಗಂಭೀರ ವಿಚಾರಗಳನ್ನು ಜನರ ಮುಂದಿಡಲಿದ್ದಾರೆ. ಜತೆಗೆ ಗುರುವಾರ ದೆಹಲಿಯಲ್ಲಿ ಬಿಡುಗಡೆ ಮಾಡಲಾದ ದಾಖಲೆಗಳ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಶುಕ್ರವಾರವೂ ಪ್ರದರ್ಶಿಸಲಿದ್ದಾರೆ. ಅವರ ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರೂ ಮತಗಳ್ಳತನ ಕುರಿತಂತೆ ವಿವರಣೆ ನೀಡಲಿದ್ದಾರೆ.
ಮುಖ್ಯ ಚುನಾವಣಾಧಿಕಾರಿಗೆ ದಾಖಲೆ ಸಲ್ಲಿಕೆ:ಪ್ರತಿಭಟನಾ ಸಮಾವೇಶವು ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಅದಾದ ನಂತರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರ ನಾಯಕರ ನಿಯೋಗ ಶೇಷಾದ್ರಿ ರಸ್ತೆಯಲ್ಲಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಮತಗಳವು ಮತ್ತು ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ಆರೋಪಗಳ ಕುರಿತ ದಾಖಲೆ ಸಹಿತ ದೂರನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.