ಕನ್ನಡಪ್ರಭ ವಾರ್ತೆ ಇಂಡಿ

ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವರದಕ್ಷಿಣೆ ಪಿಡುಗು ನಿರ್ಮೂಲನೆ ಸಭೆಯಲ್ಲಿ ತಾಲೂಕಿನ ಯಾವುದೇ ತಾಂಡಾದಲ್ಲಿ ವರದಕ್ಷಿಣೆ ತೆಗೆದುಕೊಳ್ಳದೆ, ಸರಳವಾಗಿ ಮದುವೆ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಬಂಜಾರಾ ಸಮಾಜದ ಗುರು ಸೋಮಲಿಂಗ ಮಹಾರಾಜ ಕೆಸರಟ್ಟಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ, ತಾಲೂಕಿನ ತಾಂಡಾಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಬಂಜಾರಾ ಸಮಾಜದ ಮದುವೆ, ಜಾತ್ರೆ ಕಾರ್ಯಕ್ರಮಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ವರದಕ್ಷಿಣೆ ಕೊಡುವುದು ಅಥವಾ ತೆಗೆದುಕೊಳ್ಳುವುದನ್ನು ಮಾಡಬಾರದು, ಡಿಜೆ ಬಳಸಬಾರದು, ಮದ್ಯ ನಿಷೇಧಿಸಬೇಕು ಎಂದು ಪ್ರತಿಜ್ಞೆ ಮಾಡಲಾಗಿದೆ. ಸಮಾಜದ ಮುಖಂಡರು, ಕಾರಬಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸೋಮಲಿಂಗ ಮಹಾರಾಜ ಕೆಸರಟ್ಟಿ ಹೇಳಿದರು.

ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು. ವರದಕ್ಷಿಣೆ ಪಿಡುಗು ನಿರ್ಮೂಲನೆ, ಮದ್ಯಪಾನದಿಂದಗುವ ದುಷ್ಪರಿಣಾಮಗಳ ಕುರಿತು ತಾಂಡಾಗಳಲ್ಲಿ ಸಮಾಜದಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.


ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಚವ್ಹಾಣ ಮಾತನಾಡಿ, ಬಂಜಾರಾ ಸಂಸ್ಕೃತಿ, ಸಂಪ್ರದಾಯ, ಪರಂಪರೆ ವಿಶಿಷ್ಟವಾದದ್ದು. ಸಮಾಜದವರು ಇತ್ತೀಚಿನ ದಿನಗಳಲ್ಲಿ ಮತಾಂತರ ಆಗುತ್ತಿರುವುದು ನೋವಿನ ಸಂಗತಿ. ಮತಾಂತರವಾಗದೆ ನಮ್ಮ ಸಂಸ್ಕೃತಿ ಉಳಿಸಬೇಕು ಎಂದು ಸಲಹೆ ನೀಡಿದರು.

ಬಂಜಾರ ಸಮಾಜದಲ್ಲಿ ವರದಕ್ಷಿಣೆ ಪಿಡುಗಿನಿಂದಾಗಿ ನೂರಾರು ಕುಟಂಬಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿವೆ. ಹೀಗಾಗಿ ಪ್ರತಿ ತಾಂಡಾದಲ್ಲಿ ವರದಕ್ಷಿಣೆ ನಿಷೇಧಿಸುವ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.

ಲಂಬಾಣಿ ಸಮುದಾಯದ ಜನರು ಮದುವೆಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ವರದಕ್ಷಿಣೆ ನಿಷೇಧಿಸಬೇಕು ಎಂದು ಹೇಳಿದರು.

ಈಗಾಗಲೆ ವಿವಿಧ ತಾಲೂಕಿನ ಕೆಲ ತಾಂಡಗಳಲ್ಲಿ ದಿಟ್ಟ ನಿರ್ಣಯ ತೆಗೆದುಕೊಂಡು ಇತರ ತಾಂಡಗಳಿಗೆ ಮಾದರಿಯಾಗಿವೆ. ಇಂತಹ ನಿರ್ಣಯದ ಬಗ್ಗೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಬಂಜಾರಾ ಸಂಸ್ಕೃತಿ, ಸಂಪ್ರದಾಯ, ಪರಂಪರೆ ವಿಶಿಷ್ಟವಾದದ್ದು. ಸಮಾಜದವರು ಇತ್ತೀಚಿನ ದಿನಗಳಲ್ಲಿ ಸಂಪ್ರದಾಯ ಮರೆಯುತ್ತಿರುವುದು ನೋವಿನ ಸಂಗತಿ. ನಮ್ಮ ಸಂಸ್ಕೃತಿ ಉಳಿಸಬೇಕು. ಸಮಾಜದಲ್ಲಿ ಗುಂಪುಗಾರಿಕೆ ಬೇಡ. ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸಂಘದ ಚಟಿವಟಿಕೆಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ತಾಂಡಗಳ ನಾಯಕ, ಕಾರಬಾರಿ, ಡಾವಶಾಣ ಹಾಗೂ ಸ್ವಾಮೀಜಿಗಳು, ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಾಧ್ಯಕ್ಷ ಸಂಜಯ ಜಾಧವ, ಉಪಾಧ್ಯಕ್ಷ ವಿಜಯಕುಮಾರ ರಾಠೋಡ, ಗೌರವಾಧ್ಯಕ್ಷ ಗಣಪತಿ ರಾಠೋಡ, ಮಹಿಳಾ ಘಟಕದ ಅಧ್ಯಕ್ಷೆ ಶೈಲಶ್ರೀ ರಾಠೋಡ, ಮುಖಂಡರಾದ ಧರ್ಮು ರಾಠೋಡ, ಮೋಹನ‌ ರಾಠೋಡ, ದಶರಥ ರಾಠೋಡ, ಶೇಖರ ನಾಯಕ, ಬಾಬು ರಾಠೋಡ, ಯುವ ಘಟಕದ ಅಧ್ಯಕ್ಷ ಕಿರಣ ರಾಠೋಡ, ಸುನೀಲ ರಾಠೋಡ, ಭೀಮರಾವ ಚವ್ಹಾಣ, ಸಂಜು ರಾಠೋಡ, ರಾಕೇಶ ಜಾಧವ, ದಿಲೀಪ ಚವ್ಹಾಣ, ಸಂದೀಪ ಚವ್ಹಾಣ, ತಾನಾಜಿ ಚವ್ಹಾಣ, ಸಾಗರ ರಾಠೋಡ, ಬಾಳು, ವಿಠಲ ರಾಠೋಡ, ಅವಿನಾಶ ಚವ್ಹಾಣ, ಅನೀಲ ರಾಠೋಡ, ಸುರೇಶ ರಾಠೋಡ, ತುಳಸಿ ರಾಠೋಡ, ವನೀತಾ ಬಾಳು ರಾಠೋಡ, ರುಕ್ಕಾಬಾಯಿ ರಾಠೋಡ, ಲಕ್ಷ್ಮಿಬಾಯಿ ಜಾಧವ, ಮಹಾದೇವಿ ಪ್ರೇಮಸಿಂಗ ಚವ್ಹಾಣ, ಶೋಭಾ ಜಯರಾಮ ರಾಠೋಡ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.