ಸಾರಾಂಶ
ಹಗರಿಬೊಮ್ಮನಹಳ್ಳಿ: ನಗರ ಪ್ರದೇಶಗಳಲ್ಲಿ ಪೌರಕಾರ್ಮಿಕರು ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದು ಶಾಸಕ ಕೆ.ನೇಮರಾಜ ನಾಯ್ಕ ಹೇಳಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಪೌರ ಕಾರ್ಮಿಕರು ತಮ್ಮ ಕೆಲಸದ ಜೊತೆಗೆ ತಮ್ಮ ವೈಯಕ್ತಿಕ ಆರೋಗ್ಯದತ್ತ ಚಿತ್ತ ಹರಿಸಬೇಕು. ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗೆ ಮುನ್ನುಡಿ ಬರೆದಿದ್ದಾರೆ. ಪೌರ ಕಾರ್ಮಿಕರ ಸೇವೆಯನ್ನು ಸರ್ಕಾರಗಳು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಸಭೆಯನ್ನು ಪಕ್ಷತೀತವಾಗಿ ಎಲ್ಲ ಸದಸ್ಯರ ಸಹಯೋಗದೊಂದಿಗೆ ಅಭಿವೃದ್ಧಿ ಮತ್ತು ಸ್ವಚ್ಛತೆಯಲ್ಲಿ ರಾಜ್ಯದ ಭೂಪಟದಲ್ಲಿ ಗುರುತಿಸುವಂತೆ ಮಾಡಲಾಗುವುದು. ಈ ಹಿಂದೆ ೫೫ ಸದಸ್ಯರನ್ನು ಹೊಂದಿದ್ದ ಗ್ರಾಪಂನ್ನು ಹಿಂದಿನ ಶಾಸಕ ಎಸ್.ಭೀಮನಾಯ್ಕ ಅವರ ಇಚ್ಛಾಶಕ್ತಿಯ ಫಲವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿದೆ ಎಂದರು.ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಈ ಹಿಂದಿನ ಶಾಸಕರು ಅನುದಾನ ಒದಗಿಸಿದ್ದರು. ಆದರೆ ಇಂದಿಗೂ ಕಟ್ಟಡ ನಿರ್ಮಾಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪೌರಕಾರ್ಮಿಕರು ಸ್ವಚ್ಛತಾ ಸೇವೆ ಅನನ್ಯವಾಗಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೇವೆ ಗುಣಮಟ್ಟವನ್ನು ಹೆಚ್ಚಿಸಲಾಗುವುದು ಎಂದರು.
ಪುರಸಭೆ ಸದಸ್ಯ ಅಜೀಜುಲ್ಲಾ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಡುವ ಕಾರ್ಮಿಕರನ್ನು ದೇವರಂತೆ ಕಾಣಬೇಕು. ರಾಮನೂ ಅವನೇ ರಹೀಮನೂ ಅವನೇ ಎಂಬ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ ಮರಿರಾಮಣ್ಣಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಪುರಸಭೆ ಎಲ್ಲ ವಾರ್ಡಿನ ಸದಸ್ಯರು ಒಂದು ಕುಟುಂಬವಿದ್ದಂತೆ. ರಾಜಕೀಯ ಭೇದವಿಲ್ಲದೆ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಎಂದರು.ಪಟ್ಟಣದ ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಸದಸ್ಯರಾದ ರೇಷ್ಮಾ ಸಿಕಂದರ್, ಪವಾಡಿ ಹನುಮಂತಪ್ಪ, ಎಸ್.ಕಮಲಮ್ಮ ಮಾತನಾಡಿದರು. ಈ ವೇಳೆ ದಿನಾಚರಣೆ ನಿಮಿತ್ತ ಪೌರಕಾರ್ಮಿಕರಿಗೆ ಎರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ಪೌರಕಾರ್ಮಿಕರಿಗೆ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಒಂದೇ ತೆರನಾದ ಉಡುಪುಗಳನ್ನು ಧರಿಸಿ ಗಮನಸೆಳೆದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರುಗಳು, ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ, ಮಾರೆಣ್ಣ, ಬಸವರಾಜ, ನಾಗರತ್ನ ನಿರ್ವಹಿಸಿದರು.