ಸಾರಾಂಶ
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಸಕರಿಗೆ ಮನವಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಿ.ಎಂ.ಪೋಷಣ್ ಅಭಿಯಾನ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರವಾಗಿ ಮಕ್ಕಳಿಗೆ ನೀಡುತ್ತಿರುವ ಮೊಟ್ಟೆ ಬೆಲೆಗೂ, ಮಾರುಕಟ್ಟೆ ಯಲ್ಲಿರುವ ಮೊಟ್ಟೆ ಬೆಲೆಗೂ ವ್ಯತ್ಯಾಸವಿದ್ದು ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಶಿಕ್ಷಕರಿಗೆ ಕಷ್ಟವಾಗುತ್ತಿದೆ ಇದನ್ನು ಸರ್ಕಾರ ಸರಿಪಡಿಸಬೇಕು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಒತ್ತಾಯಿಸಿದರು.
ಗುರುವಾರ ಶಾಸಕ ಟಿ.ಡಿ. ರಾಜೇಗೌಡರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಅರ್ಪಿಸಿ ಮಾತನಾಡಿ, ಪಿಎಂ ಪೋಷಣ್ ಅಭಿಯಾನದಡಿ ಎಲ್ಲಾ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿ ಕಳೆದ 2 ವರ್ಷಗಳಿಂದ 1 ರಿಂದ 10 ನೇ ತರಗತಿ ಮಕ್ಕಳಿಗೆ ಪೂರಕ ಆಹಾರವಾಗಿ ಮೊಟ್ಟೆ ವಿತರಿಸಲಾಗುತ್ತಿದೆ. ಆದರೆ, ಈ ವರ್ಷ ಸೆಪ್ಟೆಂಬರ್ 25 ರಿಂದ ಅಜೀಂ ಪ್ರೇಮ್ ಜಿ ಫೌಂಡೆಷನ್ ನಿಂದ ವಾರದ 4 ದಿನ ಸಹ ಮೊಟ್ಟೆ ನೀಡಲು ತೀರ್ಮಾನಿಸಿ ಮೊಟ್ಟೆ ನೀಡುತ್ತಿದ್ದಾರೆ.ಆದರೆ, ಮೊಟ್ಟೆ ಖರೀದಿಗೆ ಶಿಕ್ಷಣ ಇಲಾಖೆ ನಿಗದಿ ಪಡಿಸಿದ ಬೆಲೆ 5 ರು. ಇದು ಮುಕ್ತ ಮಾರುಕಟ್ಟೆಯಲ್ಲಿ 6 - 7 ರು.ಆಗಿರುತ್ತದೆ. ಆದ ಕಾರಣ ಸರ್ಕಾರ ನೀಡುತ್ತಿರುವ ಬೆಲೆಗೆ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವುದು ಮುಖ್ಯ ಶಿಕ್ಷಕರಿಗೆ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಪೂರಕ ಪೌಷ್ಠಿಕ ಆಹಾರ ಯೋಜನೆಯಡಿ ಮೊಟ್ಟೆ ಸರಬರಾಜು ಮಾಡಲು ಸಂಘ ಸಂಸ್ಥೆಗಳಿಗೆ ಜವಬ್ದಾರಿ ನೀಡಬೇಕು. ಮೊಟ್ಟೆಯ ಪ್ರತಿ ದಿನದ ಬೆಲೆ ಏರಿಳಿತಗಳಿಗೆ ಅನುಗುಣವಾಗಿ ಖರೀದಿಸಲು ಅವಕಾಶ ನೀಡಬೇಕು. ಸದ್ಯಕ್ಕೆ ಶೃಂಗೇರಿ ಕ್ಷೇತ್ರದಲ್ಲಿ ಮೊಟ್ಟೆ ಸರಬರಾಜು ಮಾಡಲು ಸಂಘಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕಾರ ಮಾಡಿದ ಶಾಸಕ ಟಿ.ಡಿ.ರಾಜೇಗೌಡ ಈ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಶೀಘ್ರದಲ್ಲೇ ಸಮಸ್ಯೆಪರಿಹರಿಸಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.ಮನವಿ ನೀಡುವ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ತಿಮ್ಮೇಶಪ್ಪ, ಆರ್.ನಾಗರಾಜ್, ಮಂಜುನಾಥ್, ಶಿಕ್ಷಕರು ಇದ್ದರು.