ಕಂಪ್ಲಿ: ಕಾಯಕವನ್ನೇ ಕೈಲಾಸ ಮಾಡಿಕೊಂಡಾಗಲೇ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರದೇವರ ಮಠದಲ್ಲಿ ನಡೆದ ವಾಮದೇವ ಶಿವಾಚಾರ್ಯರ ಗುರುವಂದನಾ ಹಾಗೂ ಜನ್ಮದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಕಾಯಕ ತತ್ವವು ಮಾನವನ ಬದುಕಿಗೆ ದಾರಿದೀಪವಾಗಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ಅದೇ ಮೂಲಾಧಾರವಾಗಿದೆ. ಕಾಯಕ್ಕೆ ಅಂತ್ಯವಿರಬಹುದು, ಆದರೆ ಕಾಯಕ ತತ್ವಕ್ಕೆ ಅಂತ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಾಯಕವನ್ನು ಅಳವಡಿಸಿಕೊಂಡು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂದು ತಿಳಿಸಿದರು. ಸಮಾಜದಲ್ಲಿ ಶ್ರಮಕ್ಕೆ ಗೌರವ ನೀಡುವ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯವಾಗಿದ್ದು, ಅದರಿಂದಲೇ ವ್ಯಕ್ತಿಯ ಉನ್ನತಿ ಮತ್ತು ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹರಗಿನದೋಣಿಯ ಸಿದ್ದಲಿಂಗ ಶಿವಾಚಾರ್ಯರು, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು, ಬಳ್ಳಾರಿಯ ಕಲ್ಯಾಣಸ್ವಾಮಿಗಳು, ಎಚ್. ವೀರಾಪುರದ ಜಡೇಶತಾತ, ಜವುಕಿನ ಕೊಟ್ರಯ್ಯತಾತ, ಕುರೇಕುಪ್ಪದ ಶರಣಬಸವ ಶರಣರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದೇ ವೇಳೆ ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚಗಲ್ ಪಂಚಾಕ್ಷರಪ್ಪ, ಸದ್ಭಕ್ತರಾದ ಆಶುಕವಿ ಚಿತ್ರದುರ್ಗದ ಜಗನ್ನಾಥ, ಬಿ. ಸದಾಶಿವಪ್ಪ, ಮಹೇಶಗೌಡ್ರು, ಪಿಗ್ಮಿ ಶರಣಬಸವನಗೌಡ, ಯಳ್ಳಾರ್ಥಿ ರಾಘವೇಂದ್ರರೆಡ್ಡಿ, ಬಜಾರ ಬಸವರಾಜ, ಘನಮಠಯ್ಯ, ಎಸ್. ರಾಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಭಕ್ತರು ಗುರುಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.