ಕನ್ನಡಪ್ರಭ ವಾರ್ತೆ ಶೃಂಗೇರಿ

ಪಟ್ಟಣದ ಹೃದಯಭಾಗ, ಜನನಿಬಿಡ ಭಾರತೀ ಬೀದಿ ರಸ್ತೆಗೆ ಹೊಂದಿಕೊಂಡಂತೆ ಇರುವ ತಾಲೂಕು ಕಚೇರಿ, ಮುಸ್ಲಿಂ ದರ್ಗಾ ಕಟ್ಟಡಗಳನ್ನು ಹೊಂದಿರುವ ಗೋರಿಗುಡ್ಡಕ್ಕೆ ನಿರ್ಮಾಣ ಹಂತದಲ್ಲಿರುವ ತಡೆಗೋಡೆ ಕುಸಿಯುತ್ತಿದ್ದು, ಗುರುವಾರ ಸ್ಥಳೀಯರು ಭಾರಿ ವಿರೋಧ, ಪ್ರತಿಭಟನೆ ವ್ಯಕ್ತಪಡಿಸಿದ್ದರು. ಶುಕ್ರವಾರ ಬೆಳಿಗ್ಗೆಯಿಂದ ಜೆಸಿಬಿ. ಹಿಟಾಚಿ, ಟಿಪ್ಪರ್‌ಗಳು ಸಹಿತ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಚುರುಕುಗೊಂಡಿತ್ತು. ಸಂಜೆಯವರೆಗೆ ಮಾತ್ರ.

ಆದರೆ ಶನಿವಾರ ಒಂದೆಡೆ ಮಳೆ ಸಂಪೂರ್ಣವಾಗಿ ನಿಂತಿತ್ತು. ಇನ್ನೊಂದೆಡೆ ತಡೆಗೋಡೆ, ಗುಡ್ಡ ಕುಸಿಯುತ್ತಿರುವ ಜಾಗದಲ್ಲಿ ಕಾಮಗಾರಿ ಸ್ಥಗಿತಗೊಂಡು ಜೆಸಿಬಿ, ಹಿಟಾಚಿಗಳು ನಿಂತಿದ್ದವು. ಮೊದಲೇ ಬಿರುಕು ಬಿಟ್ಟು, ವಾಲುತ್ತಿದ್ದ ತಡೆಗೋಡೆ ಮತ್ತಷ್ಠು ಬಿರುಕುಗೊಂಡು, ಇನ್ನಷ್ಟು ವಾಲಿ ಕುಸಿದು ಬೀಳುವ ಹಂತಕ್ಕೆ ತಲುಪುತ್ತಿದ್ದು ಜನರಲ್ಲಿ ಮತ್ತಷ್ಠು ಆತಂಕ ಹೆಚ್ಚಿಸಿದೆ.

ಶುಕ್ರವಾರ ಮೇಲ್ನೋಟಕ್ಕೆ ಅಲ್ಪಸ್ವಲ್ಪ ಮಣ್ಣು ತೆರವುಗೊಳಿಸಿ,ಇನ್ನುಳಿದಂತೆ ಟಾರ್ಪಲ್ ಮುಚ್ಚಿಡಲಾಗಿದೆ. ಮಳೆ ಬಂದರೆ ನೀರು ಮತ್ತೆ ತಡೆಗೋಡೆ ಒಳಭಾಗದುದ್ದಕ್ಕೂ ಸಂಗ್ರಹವಾಗಿ ಯಾವುದೇ ಕ್ಷಣದಲ್ಲಿ ತಡೆಗೋಡೆ ಕುಸಿಯುವ ಸಂಭವವಿದೆ. ದಿನೇ ದಿನೇ ತಡೆಗೋಡೆಯಲ್ಲಿರುವ ಬಿರುಕುಗಳು ಹೆಚ್ಚತ್ತಿದ್ದು, ತಡೆಗೋಡೆ ಪಟ್ಟಣ, ಮನೆಗಳತ್ತ ವಾಲುತ್ತಿದೆ. ಗುಡ್ಡದ ಮಣ್ಣು ಜಾರುವ ಹಂತಕ್ಕೆ ತಲುಪಿದೆ. ಈಗ ಮುಂಗಾರು ಮಳೆಯ ಆರಂಭವಷ್ಠೆ, ಆದರೂ ಬಿಡುವು ನೀಡಿತ್ತು. ಇನ್ನು ದಿಢೀರನೇ ಮಳೆಯ ಆರ್ಭಟ ಆರಂಭಗೊಂಡರೆ ತಡೆಗೋಡೆ, ಗುಡ್ಡ ಸಹಿತ ಪಟ್ಟಣದ ಭಾರತೀ ಬೀದಿಯನ್ನು ದಾಟುವುದರಲ್ಲಿ ಅನುಮಾನವಿಲ್ಲ. ಆದರೆ ಮಳೆ ಬಿಟ್ಟಿದ್ದರೂ, ನಿರ್ಲಕ್ಷ್ಯ ಮಾತ್ರ ಇನ್ನೂ ಬಿಟ್ಟಿಲ್ಲ.

ಗುಡ್ಡದ ಕೆಳಗೆ ಹಲವು ವಾಸದ ಮನೆಗಳು, ಅಂಗಡಿ, ಹೋಟೆಲ್‌ಗಳು ಇವೆ. ತಾಲೂಕು ಆಡಳಿತ ತರಾತುರಿಯಲ್ಲಿ ಅವರಿಗೆಲ್ಲ ಕೂಡಲೇ ಸ್ಥಳಾಂತರಗೊಳ್ಳುವಂತೆ ಲಿಖಿತ ಸೂಚನೆ ನೀಡಿದೆ. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಾಗಿ ಮೌಖಿಕ ಭರವಸೆ ನೀಡಿದ್ದಾರೆ. ಅಷ್ಟೇ.ಕೆಲವರು ಸ್ಥಳಾಂತರಗೊಂಡರೆ, ಇನ್ನು ಕೆಲವರು ಹೋಗುವುದಾದರೂ ಎಲ್ಲಿಗೆ ಎಂದು ಗುಡ್ಡದಡಿಯ ಮನೆಗಳಲ್ಲಿಯೇ ಇದ್ದಾರೆ. ಪರ್ಯಾಯ ವ್ವವಸ್ಥೆಯೂ, ಪರಿಹಾರವೂ ಇಲ್ಲದೇ ಅವೈಜ್ಞಾನಿಕ, ಕಳಪೆ ಕಾಮಗಾರಿಯ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ ನಿವಾಸಿಗಳು.


ಮಳೆ ನಿಂತಿದೆ ಕಾಲಾಹರಣ ಮಾಡದೇ ಕಾಮಗಾರಿ ಚುರುಕುಗೊಳಿಸಬೇಕು. ಮಳೆ ಕಡಿಮೆಯಾಗಿದೆ. ಶುಕ್ರವಾರ ಮಣ್ಣು ತೆರವುಗೊಳಿಸುವ ಕೆಲಸ ಆರಂಭವಾದರೂ ಶನಿವಾರ ನಿಲ್ಲಿಸಿದ್ದಾರೆ. ಮಳೆ ದಿಢೀರನೇ ಆರಂಭಗೊಂಡರೆ ಮತ್ತಷ್ಠು ಅಪಾಯ ಜಾಸ್ತಿ.ಕಾಮಗಾರಿ ಚುರುಕುಗೊಳಿಸಹಬೇಕು.ಸ್ಥಳೀಯರಿಗೆ ಪರಿಹಾರ ನೀಡಬೇಕು. ಪರ್ಯಯ ವ್ಯವಸ್ಥೆ ಮಾಡಬೇಕು. ಸ್ಥಳಾಂತರಕ್ಕೆ ಲಿಖಿತ ನೋಟಿಸ್ ನೀಡಿ, ಮೌಖಿಕವಾಗಿ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಲಾಗಿದೆ.ಇದು ಜನರ ಬದುಕಿನ ಪ್ರಶ್ನೆ.

ಡಾ.ಅಣ್ಣದೊರೆ ಸ್ಥಳಿಯ.

ಕಾಮಗಾರಿಗೆ ಮೊದಲು ಅಪಾಯದ ಬಗ್ಗೆ ನಾವು ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ಈ ಒಂದೆಡೆ ತಡೆಗೋಡೆ ಬಿರುಕು ಬಿಟ್ಟು,ಕುಸಿಯುತ್ತಿದೆ, ಸ್ಥಳಾಂತರ ಮಾಡಿ ಎಂದರೆ ನಾವು ಎಲ್ಲಿಗೆ ಹೋಗಬೇಕು. ಪರ್ಯಾಯ ವ್ಯವಸ್ಥೆ, ಪರಿಹಾರದ ಬಗ್ಗೆ ಲಿಖಿತವಾಗಿ ನೀಡಿಲ್ಲ. ತೆರವು ಮಾಡಲು ಲಿಖಿತ ನೋಟಿಸ್ ನೀಡಿದ್ದಾರೆ. ಇಲ್ಲಿನ ಹಲವು ವರ್ಷಗಳಿಂದ ಅಂಗಡಿ, ಹೋಟೆಲ್‌, ಲಾಡ್ಜ್, ಕ್ಲಿನಿಕ್, ವಾಸದ ಮನೆಗಳಿವೆ. ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೇ ಎಲ್ಲಿಗೆ ಹೋಗಬೇಕು.ಕೂಡಲೇ ಸರ್ಕಾರ ಸೂಕ್ತ ಪರಿಹಾರ,ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.

ಪ್ರಶಾಂತ್ ಕುಮಾರ್ ಸ್ಥಳೀಯ ವರ್ತಕ.