ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ (ಶ್ರೇಷ್ಠ ಗುರು) ಆಗಿ ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರನ್ನು ನೇಮಕಗೊಳಿಸಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಆದೇಶ ಹೊರಡಿಸಿದ್ದಾರೆ. ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರು ಪ್ರಸ್ತುತ ಕಳತ್ತೂರು ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶನಿವಾರ ಉಡುಪಿಯ ಬಿಷಪ್ ಹೌಸ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರು ವಿಕಾರ್ ಜನರಲ್ ಹುದ್ದೆಯನ್ನು ಸ್ವೀಕರಿಸಿದರು. ಉಡುಪಿ ಧರ್ಮಾಧ್ಯಕ್ಷ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಪ್ರಾರ್ಥನಾ ಸಭೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಸ್ಟೀಫನ್ ಡಿಸೋಜಾ, ಕಾಲೇಜ್ ಆಫ್ ಕನ್ಸಲ್ಟರ್ಸ್ ಸದಸ್ಯರು ವಂ. ಜಿತೇಶ್ ಕ್ಯಾಸ್ಟೆಲಿನೋ ಮತ್ತು ಪ್ರೊಕ್ಯುರೇಟರ್ ಮಾರ್ಸೆಲ್ ಡಿಸೋಜಾ ಉಪಸ್ಥಿತರಿದ್ದರು. ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಶಿರ್ವ ಸಮೀಪದ ಪೆರ್ನಾಲ್ ಚರ್ಚಿನವರಾಗಿದ್ದು, ದಿ. ಜಾನ್ ಲೂವಿಸ್ ಮತ್ತು ತೆರೆಸಾ ಲೂವಿಸ್ ದಂಪತಿಯ ಪುತ್ರರಾಗಿದ್ದಾರೆ. 1976ರ ಜೂ 30ರಂದು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಯಲ್ಲಿ ಸೇರಿ, 1987ರ ಏ.28ರಂದು ಯಾಜಕರಾಗಿ ಅಭಿಷೇಕಗೊಂಡರು.

ಕಳೆದ 39 ವರ್ಷಗಳ ಸಮರ್ಪಿತ ಯಾಜಕ ಸೇವೆಯಲ್ಲಿ, ಫ್ರಾನ್ಸಿಸ್ ಅವರು ಧರ್ಮಪ್ರಾಂತ್ಯದ ವಿವಿಧ ಧಾರ್ಮಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. 1987 - 1997ರವರೆಗೆ ಮಿಷನರಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿ, ಬೀದರ್‌, ಭಾಲ್ಕಿ, ಜಲಸಂಗಿ, ಹುಮನಾಬಾದ್ ಹಾಗೂ ಬಸವ ಕಲ್ಯಾಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. 1997- 2004ರವರೆಗೆ ಮಂಗಳೂರು ಬಜಾಲಿನ ಹೋಲಿ ಸ್ಪಿರಿಟ್ ಚರ್ಚಿನಲ್ಲಿ ಧರ್ಮಗುರುಗಳಾಗಿ, 2004-2006ರವರೆಗೆ ಕೆನರಾ ಕಮ್ಯುನಿಕೇಶನ್ ಸೆಂಟರ್ ಹಾಗೂ ವೊಕೇಶನ್ ಸರ್ವಿಸ್ ಸೆಂಟರ್ ನಿರ್ದೇಶಕ, 2006-2008ರವರೆಗೆ ಸಂದೇಶ – ಕರ್ನಾಟಕ ಪ್ರಾದೇಶಿಕ ಸಂವಹನ ಕೇಂದ್ರದ ನಿರ್ದೇಶಕ ಹಾಗೂ 2004-2008ರವರೆಗೆ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. 2008-2016ರವರೆಗೆ ಮಣಿಪಾಲದ ಕ್ರೈಸ್ಟ್ ಚರ್ಚ್, 2016 - 2022ರವರೆಗೆ ಮುದರಂಗಡಿ ಸೇಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್‌, 2022 - 2026ರವರೆಗೆ ಕಲತ್ತೂರು ಅವರ್ ಲೇಡಿ ಆಫ್ ಪರ್ಪೆಚುವಲ್ ಸೆಕ್ಯೂರ್ ಚರ್ಚಿನಲ್ಲಿ ಸೇವೆ ಸಲ್ಲಿಸಿದ್ದರು. ಅವರನ್ನು ಮೇ 18ರಿಂದ ಕಲ್ಯಾಣಪುರದ ಮಿಲಾಗ್ರಿಸ್ ಪ್ರಧಾನಾಲಯದ ರೆಕ್ಟರ್ ಹಾಗೂ ಧರ್ಮಗುರುಗಳಾಗಿ ಅದರೊಂದಿಗೆ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಕೂಡ ನೇಮಕ ಮಾಡಲಾಗಿದೆ.