ವಿಘ್ನೇಶ್ ಎಂ. ಭೂತನಕಾಡು/ದುಗ್ಗಳ ಸದಾನಂದ ನಾಪೋಕ್ಲುಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯ ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಕುಲ್ಲೇಟಿರ ಕುಟುಂಬ ಚಾಂಪಿಯನ್ ಪ್ರಶಸ್ತಿ ಗಳಿಸಿತು.

ಕಳೆದ 26 ದಿನಗಳ ಕಾಲ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಚೇನಂಡ ಹಾಕಿ ಉತ್ಸವ ನಡೆದಿದ್ದು, ಶನಿವಾರ ರೋಚಕ ಫೈನಲ್ ಪಂದ್ಯ ನಡೆಯಿತು. ಪುಟಾಣಿಗಳು, ವೃದ್ಧರು, ಮಹಿಳೆಯರು ಎನ್ನದೇ ಸಾವಿರಾರು ಹಾಕಿ ಪ್ರೇಮಿಗಳು ಫೈನಲ್ ಪಂದ್ಯಕ್ಕೆ ಮೈದಾನದಲ್ಲಿ ಸಾಕ್ಷಿಯಾದರು.

ನಾಪೋಕ್ಲುವಿನವರೇ ಆದ ಕುಲ್ಲೇಟಿರ ತಂಡ 3-1 ಗೋಲುಗಳನ್ನು ಗಳಿಸುವ ಮೂಲಕ ಚೆಪ್ಪುಡಿರ ತಂಡವನ್ನು ಸೋಲಿಸಿತು. ಪಂದ್ಯದ ಆರಂಭದಲ್ಲಿ ಉತ್ಸಾಹದಿಂದ ಆಡಿದ ಚೆಪ್ಪುಡಿರ ತಂಡದ ಆಟಗಾರರು ಕೊನೆಯಲ್ಲಿ ಗೋಲು ದಾಖಲಿಸುವಲ್ಲಿ ಎಡವಿದರು.

ಪಂದ್ಯದ ಮೊದಲಾರ್ಧದಲ್ಲಿ ಚೆಪ್ಪುಡಿರ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಕೂಡ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕುಲ್ಲೇಟಿರ ತಂಡದ ಗೋಲ್ ಕೀಪರ್ ಅದ್ಬುತ ವಾಗಿ ತಡೆಯುವಲ್ಲಿ ಯಶಸ್ವಿಯಾದರು. ಪಂದ್ಯದಲ್ಲಿ ಸುಮಾರು 7 ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿದರೂ ಕೂಡ ಚೆಪ್ಪುಡಿರ ತಂಡ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಯಿತು.ಕುಲ್ಲೇಟಿರ ತಂಡದ ಪರ ರೋಷನ್ ಲೋಕೇಶ್, ಅವನೀಶ್ ಮಂದಪ್ಪ ಹಾಗೂ ಶುಭಂ ಚೆಟ್ಟಿಯಪ್ಪ ಅವರು ತಲಾ ಒಂದೊಂದು ಗೋಲು ಗಳಿಸಿದರೆ, ಚೆಪ್ಪುಡಿರ ಪರ ವಚನ್ ಚಿಣ್ಣಪ್ಪ ಒಂದು ಗೋಲು ಗಳಿಸಿದರು.ವಿನ್ನರ್ಸ್ ಪ್ರಶಸ್ತಿ ಗಳಿಸಿ ಕುಲ್ಲೇಟಿರ ತಂಡಕ್ಕೆ ರು.3 ಲಕ್ಷ ನಗದು ಹಾಗೂ ಟ್ರೋಫಿ, ಕೊಡವ ಹಾಕಿ ಅಕಾಡೆಮಿಯ ಬೆಳ್ಳಿ ರೋಲಿಂಗ್ ಟ್ರೋಫಿ, ದ್ವಿತೀಯ ಬಹುಮಾನಿತ ಚೆಪ್ಪುಡರ ತಂಡಕ್ಕೆ ರು.2 ಲಕ್ಷ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.2027ರಲ್ಲಿ ಅಜ್ಜಿಕುಟ್ಟೀರ ಕಪ್: 27ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಅಜ್ಜಿಕುಟ್ಟೀರ ಕುಟುಂಬಸ್ಥರ ಮುಂದಾಳತ್ವದಲ್ಲಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ನಡೆಯಲಿದ್ದು, ನಾಪೋಕ್ಲುವಿನ ಮೈದಾನದಲ್ಲಿ ಅಜ್ಜಿಕುಟ್ಟೀರ ಕುಟುಂಬಸ್ಥರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಸಿ ತಮ್ಮ ಕುಟುಂಬದ ಒಗ್ಗಟ್ಟು ಪ್ರದರ್ಶಿಸಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಯಲ್ಲಿ‌ ಸಾಗಿದರು. ನಂತರ ಕುಟುಂಬಸ್ಥರು ಮೈದಾನದಲ್ಲಿ ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ಫೈನಲ್ ಪಂದ್ಯದ ಕೊನೆಯಲ್ಲಿ ಪ್ರಶಸ್ತಿ ವಿತರಣೆ ಬಳಿಕ ಕೊಡವ ಹಾಕಿ ಅಕಾಡೆಮಿಯ ಪ್ರಮುಖರು ಅಜ್ಜಿಕುಟ್ಟೀರ ಕುಟುಂಬಸ್ಥರಿಗೆ ಧ್ವಜ ಹಸ್ತಾಂತರವನ್ನು ಮಾಡುವ ಮೂಲಕ ಮುಂದಿನ ಬಾರಿ ಹಾಕಿ ನಡೆಸಲು ಜವಾಬ್ದಾರಿ ನೀಡಿದರು.

ಪರದಂಡ ತಂಡಕ್ಕೆ ತೃತೀಯ ಬಹುಮಾನ: ಚೇನಂಡ ಕಪ್‌ ನಲ್ಲಿ ತೃತೀಯ ಸ್ಥಾನಕ್ಕಾಗಿ ಶನಿವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಪರದಂಡ ತಂಡ ಪಳಂಗಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು‌. ವಿಜೇತ ತಂಡದ ಪರ ಅಮನ್ ಕುಶಾಲಪ್ಪ ಒಂದು ಗೋಲು ಬಾರಿಸಿದರು‌‌. ತೃತೀಯ ಹಾಗೂ ನಾಲ್ಕನೇ ಬಹುಮಾನ ಪಡೆದ ವಿಜೇತರಿಗೆ ತಲಾ ಒಂದು ಲಕ್ಷ ರು. ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.


ಕೊಡವ ಕೌಟುಂಬಿಕ ಹಾಕಿಗೆ ಕೇಂದ್ರ ಸರ್ಕಾರದಿಂದಲೂ ಸಹಕಾರ : ಮನ್ಸುಖ್ ಮಾಂಡವಿಯಾ ಭರವಸೆರಾಜ್ಯ, ದೇಶ ಮಾತ್ರವಲ್ಲದೆ ವಿಶ್ವದ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿಗೆ ಕೇಂದ್ರ ಸರ್ಕಾರದಿಂದಲೂ ಸಹಕಾರ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡೊವಿಯಾ ಭರವಸೆ ನೀಡಿದ್ದಾರೆ.ಚೇನಂಡ ಕಪ್ ಹಾಕಿ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಒಲಂಪಿಕ್ ಕೌನ್ಸಿಲ್ ಕ್ರೀಡೆ ಒಂದು ಸಮುದಾಯದ ಒಗ್ಗೂಡುವಿಕೆಗೆ ಸಹಕಾರಿಯಾಗಬೇಕು ಎಂದಿದೆ. ಆದರೆ ಕೊಡವ ಸಮುದಾಯದ ಪೂರ್ವಜರು ಇದನ್ನು ಈ ಹಿಂದೆ ಮಾಡಿ ತೋರಿಸಿದ್ದಾರೆ ಇದು ಶ್ಲಾಘನೀಯ ಎಂದರು.

18 ಜನ ಒಲಂಪಿಯನ್ ನೀಡಿದ ಈ ಕೊಡವ ಭೂಮಿಗೆ ವಂದನೀಯ. ಕ್ರೀಡಾ ಪ್ರತಿಭೆಗಳಿರುವ ಕೊಡಗಿಗೆ ಪ್ರೋತ್ಸಾಹ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಚಿವರು ಹೇಳಿದರು.

ಕ್ರೀಡೆ ಎನ್ನುವುದು ರಾಜಕೀಯ ಮೈದಾನ ಅಲ್ಲ. ಸರ್ಕಾರ ಸರ್ಕಾರದ ನಡುವೆ ಸಹಯೋಗ ಇರಬೇಕು. ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ದೇಶಕ್ಕೆ ಮಾದರಿಯಾಗಿದ್ದು, ಇದನ್ನು ಇಡೀ ದೇಶಕ್ಕೆ ಪರಿಚಯ ಮಾಡುತ್ತೇನೆ. ಶೂಟಿಂಗ್ ಗೂ ಪ್ರೋತ್ಸಾಹ ನೀಡುತ್ತೇನೆ. ಇಂತಹ ಕ್ರೀಡೆಯಲ್ಲಿ ಉತ್ತಮ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ಆಯ್ಕೆಮಾಡಿ ತರಬೇತಿ ನೀಡಿದರೆ ದೇಶಕ್ಕೆ ಮಾದರಿಯಾಗುತ್ತದೆ. ಇದು ಹೊಸ ದಿಕ್ಕನ್ನು ನೀಡುವ ಕ್ಷಣವಾಗಿದೆ ಎಂದು ಶ್ಲಾಘಿಸಿದರು.ಸಂಸದ ಯದುವೀರ್ ಒಡೆಯರ್ ಮಾತನಾಡಿ ಭಾರತದಲ್ಲಿ ಕ್ರೀಡೆಯ ಕ್ರಾಂತಿ ಸೃಷ್ಟಿಯಾಗುತ್ತಿದೆ. ಕ್ರೀಡೆಯ ವ್ಯವಸ್ಥೆ ಆಧುನೀಕರಣ, ಸರಳ ಮಾಡಲಾಗಿದೆ ಎಂದು ತಿಳಿಸಿದ ಅವರು, ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಹೆಸರು ಮಾಡಿದೆ. ಹಾಕಿ ಗೆ ಕ್ರೀಡೆಗೆ ವಿಶೇಷ ಸೌಲಭ್ಯವನ್ನು ನೀಡಬೇಕು. ಅಕಾಡೆಮಿ ಸ್ಥಾಪಿಸಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಮನವಿ ಮಾಡಿದರು. ಕ್ರೀಡೆಯಿಂದ ಏಕತೆ ಸಾಧ್ಯ. ಒಗ್ಗಟ್ಟಿನ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಬೋಪಣ್ಣ ಮಾತನಾಡಿ 1997ರಲ್ಲಿ ಪಾಂಡಂಡ ಕುಟ್ಟಣಿ ಅವರು ಆರಂಭಿಸಿದರು. ಅಂದು 60 ಕುಟುಂಬ ಪಾಲ್ಗೊಂಡಿತ್ತು‌. ಇಂದು 300ಕ್ಕೂ ಅಧಿಕ ಕುಟುಂಬಗಳು ಪಾಲ್ಗೊಳುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಹಾಕಿ ಉತ್ಸವಕ್ಕೆ ಅನುದಾನ ನೀಡುತ್ತಿದೆ. ಅದರಂತೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಬೋಪಣ್ಣ ಮಾತನಾಡಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಕೊಡಗು ಜನಾಂಗಕ್ಕೆ ದೊಡ್ಡ ಹೆಮ್ಮೆಯ ವಿಷಯ. ಇನ್ನಷ್ಟು ವರ್ಷಗಳ ಕಾಲ ಈ ಹಾಕಿ ಉತ್ಸವ ನಿರಂತರವಾಗಿ ನಡೆಯಲಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಬೋಪಣ್ಣ, ಚೇನಂಡ ಹಾಕಿ ಉತ್ಸವದ ಅಧ್ಯಕ್ಷ ಕಂಬಣಿ ಕರುಂಬಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕೇಂದ್ರದ ಕ್ರೀಡಾ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಶಾಸಕ ಎ.ಎಸ್. ಪೊನ್ನಣ್ಣ:ಕೇಂದ್ರ ಕ್ರೀಡಾ ಸಚಿವ ಮಾನ್ಸೂಕ್ ಮಾಂಡವಿಯ ಅವರಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡಗಿನ ಕ್ರೀಡಾ ಕ್ಷೇತ್ರಕ್ಕೆ ಅನುದಾನ ಹಾಗೂ ವಿಶೇಷ ಯೋಜನೆ ಘೋಷಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭ ಮಾತನಾಡಿದ ಪೊನ್ನಣ್ಣ ಅವರು ಹಾಕಿ, ಬ್ಯಾಡ್ಮಿಂಟನ್ ಸೇರಿ ಹಲವು ಕ್ರೀಡೆಯಲ್ಲಿ ಕೊಡಗಿನವರು ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಪುಟ್ಟ ಜಿಲ್ಲೆ ಕೊಡಗಿನ ಸುಮಾರು 18 ಮಂದಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ ಎಂದರು.ವಿ. ಬಾಡಗದಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣ ಆಗುತ್ತಿದೆ. ಹಲವು ಕ್ರೀಡೆಗಳ ತರಬೇತಿ ಹಾಗೂ ವಸತಿ ವ್ಯವಸ್ಥೆ ಇದೆ. ಈಗಾಗಲೇ ರಾಜ್ಯ ಸರ್ಕಾರದ ಅನುದಾನದಲ್ಲಿ ಕೆಲಸ ನಡೆಯುತ್ತಿದೆ. ಅದರಂತೆ ಕೇಂದ್ರ ಸರ್ಕಾರದಿಂದಲೂ ಕೂಡ ಅನುದಾನ ನೀಡುವಂತೆ ಮನವಿ ಮಾಡಿದರು‌.

ನಾಲ್ಕನೇ ಬಾರಿ ಕುಲ್ಲೇಟಿರ ಚಾಂಪಿಯನ್:ಕುಲ್ಲೇಟಿರ ಕುಟುಂಬವು ಕೊಡವ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಇದೀಗ ನಾಲ್ಕನೇ ಬಾರಿ ಚಾಂಪಿಯನ್ ಆಗಿದೆ. 2026ರ ಚೇನಂಡ ಕಪ್ ನಲ್ಲಿ ವಿನ್ನರ್ಸ್, 1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರ ಕಪ್, 1999ರಲ್ಲಿ ಕಾಕೋಟುಪರಂಬಿನಲ್ಲಿ ನಡೆದ ಬಲ್ಲಚಂಡ ಕಪ್ ಹಾಗೂ 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚೆಕ್ಕೇರ ಕಪ್ ನಲ್ಲಿ ಕೂಡ ವಿನ್ನರ್ಸ್ ಪ್ರಶಸ್ತಿ ಗಳಿಸಿತು. 2018ರಲ್ಲಿ ನಾಪೋಕ್ಲುವಿನಲ್ಲಿ 22ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿತ್ತು.

ಕುಲ್ಲೇಟಿರ ಕುಟುಂಬವು ಕೊಡವ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಇದೀಗ ನಾಲ್ಕನೇ ಬಾರಿ ಚಾಂಪಿಯನ್ ಆಗಿದೆ. 2026ರ ಚೇನಂಡ ಕಪ್ ನಲ್ಲಿ ವಿನ್ನರ್ಸ್, 1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರ ಕಪ್, 1999ರಲ್ಲಿ ಕಾಕೋಟುಪರಂಬಿನಲ್ಲಿ ನಡೆದ ಬಲ್ಲಚಂಡ ಕಪ್ ಹಾಗೂ 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚೆಕ್ಕೇರ ಕಪ್ ನಲ್ಲಿ ಕೂಡ ವಿನ್ನರ್ಸ್ ಪ್ರಶಸ್ತಿ ಗಳಿಸಿತು. 2018ರಲ್ಲಿ ನಾಪೋಕ್ಲುವಿನಲ್ಲಿ 22ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿತ್ತು.