ಸಾಧಕನ ತ್ಯಾಗದಿಂದ ಪ್ರತಿಫಲ: ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ

| Published : Nov 11 2025, 02:45 AM IST

ಸಾಧಕನ ತ್ಯಾಗದಿಂದ ಪ್ರತಿಫಲ: ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಧಕ ತ್ಯಾಗ ಮಾಡಿದಾಗ ಪ್ರತಿಫಲ ದೊರೆಯುತ್ತದೆ. ರಾಜ್ಯದ ಮಠಗಳ ಆಸ್ತಿಯ ಒಂದಿಂಚು ಜಾಗವೂ ಪರರ ಪಾಲಿಗೆ ಒಳಗಾಗಬಾರದು.

ಬಣ್ಣದಮಠದಲ್ಲಿ ಶ್ರೀ ಗುರುಸಿದ್ಧೇಶ್ವರ ಸಾಂಸ್ಕೃತಿಕ ಭವನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಶಿರಸಿ

ಸಾಧಕ ತ್ಯಾಗ ಮಾಡಿದಾಗ ಪ್ರತಿಫಲ ದೊರೆಯುತ್ತದೆ. ರಾಜ್ಯದ ಮಠಗಳ ಆಸ್ತಿಯ ಒಂದಿಂಚು ಜಾಗವೂ ಪರರ ಪಾಲಿಗೆ ಒಳಗಾಗಬಾರದು. ಪ್ರಾಮಾಣಿಕ, ನಿಷ್ಠಾವಂತ, ಬದ್ಧತೆಯ ಶಿಷ್ಯ ಬಣ್ಣದ ಮಠಕ್ಕೆ ದೊರೆತಿರುವುದರಿಂದ ಭವ್ಯ ಸಾಂಸ್ಕೃತಿಕ ಭವನ ನಿರ್ಮಾಣ ಸಾಧ್ಯವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನುಡಿದರು.

ಸೋಮವಾರ ನಗರದ ಬಣ್ಣದಮಠದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಗುರುಸಿದ್ಧೇಶ್ವರ ಸಾಂಸ್ಕೃತಿಕ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕರ್ನಾಟಕದಲ್ಲಿರುವ ಹಲವಾರು ಮಠದ ಆಸ್ತಿಗಳು ಕಳೆದು ಹೋಗಿದೆ. ಮಠದ ಒಂದಿಂಚೂ ಜಾಗ ಬೇರೆಯವರ ಪಾಲಾಗಬಾರದು. ಆದರೆ ಶಿಷ್ಯರು ದಾನ ನೀಡಿದ ಆಸ್ತಿಗಳು ಶಿಷ್ಯರ ಒಳಗಡೆ ಇರುತ್ತದೆ. ಭಕ್ತರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಆಸ್ತಿ ಪಡೆದುಕೊಳ್ಳಬೇಕಿದೆ. ಬಣ್ಣದಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಮಠಕ್ಕೆ ಆಸ್ತಿಯ ಸದೃಢತೆ ತಂದು ಕೊಡುವ ಕೆಲಸ ಮಾಡಿದ್ದಾರೆ ಎಂದರು.

ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಮಠದ ವ್ಯವಸ್ಥಾಪಕ ಎಸ್‌.ಬಿ. ಹಿರೇಮಠ ಮಠ ಅಭಿವೃದ್ಧಿಪಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದ ಶ್ರೀಗಳು, ಮಠ ಜೋರ್ಣೋದ್ಧಾರವಾಗಬೇಕಾದರೆ ಎಸ್.ಬಿ. ಹಿರೇಮಠ ಅಂತಹ ವ್ಯಕ್ತಿ ಅವಶ್ಯ. ಹುಬ್ಬಳ್ಳಿ ಮೂರುಸಾವಿರ ಮಠ ಹಾಗೂ ಬಣ್ಣದ ಮಠಕ್ಕೆ ಹಿಂದಿನಿಂದಲೂ ಅವಿನಾಭಾವ ಪ್ರೀತಿ-ವಿಶ್ವಾಸದ ಸಂಬಂಧವಿದೆ. ಅದೇ ಪರಂಪರೆ ಇಂದಿಗೂ ಮುಂದುವರೆದಿದೆ ಎಂದು ಹೇಳಿದರು.

ದಾಸೋಹ ಭವನ ಉದ್ಘಾಟಿಸಿ, ಶಿರಹಟ್ಟಿಯ(ಬಾಲೆಹೊಸೂರ) ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಬಣ್ಣದಮಠದಲ್ಲಿ ಇಂದ್ರಭವನ ನಿರ್ಮಾಣವಾಗಿದೆ. ಸುಂದರ ಕಟ್ಟಡದ ಭೂಮಿಪೂಜೆಯಲ್ಲಿ ಆಡಂಭರವಿಲ್ಲ. ಉದ್ಘಾಟನೆಯಲ್ಲಿ ಅಂಹಕಾರವಿಲ್ಲ. ಅಷ್ಟು ಸುಂದರವಾಗಿ ಕಾರ್ಯಕ್ರಮ ನಡೆದಿದೆ. ಶಿವಲಿಂಗ ಸ್ವಾಮೀಜಿ ತ್ಯಾಗದಿಂದ ವ್ಯವಸ್ಥಾಪಕರ ತಾಳ್ಮೆಯ ಕಾರಣದಿಂದ ವೈಭವದ ಕಾರ್ಯಕ್ರಮ ರೂಪುಗೊಂಡಿದೆ. ಮಠದ ಪರಾಧೀನವಾದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಶ್ರೇಯಸ್ಸು ವ್ಯವಸ್ಥಾಪಕ ಎಸ್.ಬಿ.ಹಿರೇಮಠ ಅವರಿಗೆ ಲಭಿಸುತ್ತದೆ. ಬಹುಮುಖ ವ್ಯಕ್ತಿತ್ವದ, ಪರಿಪೂರ್ಣ ವ್ಯಕ್ತಿ. ಕಟ್ಟಡದ ಗಂಟನ್ನು ಮೂರುಸಾವಿರ ಮಠದ ಶ್ರೀಗಳು ಬಿಚ್ಚಿದ್ದಾರೆ.‌ ಇದರ ಉಪಯೋಗವನ್ನು ಜನರು ಬಳಸಿಕೊಳ್ಳಬೇಕು ಎಂದರು.

ಪಾಕಶಾಲೆ ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.

ಬಣ್ಣದ ಮಠದಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ, ಮಠದ ಅಭಿವೃದ್ಧಿಗೆ ಕಾರಣರಾದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಅವರನ್ನು ಶ್ರೀಗಳು ಹಾಗೂ ಇತರ ಸಂಘ-ಸಂಸ್ಥೆಗಳಿಂದ ಗೌರವಿಸಲಾಯಿತು.

ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಕೆ.ಎಸ್. ಶೆಟ್ಟರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಶಿರಸಿ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕಿ ಆರತಿ ಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು,

ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮೇಶ್ವರ ಶಿವಾಚಾರ್ಯ ಸ್ವಾಮೀಜಿ, ನೀಲಗುಂದದ ಗುದ್ನೇಶ್ವರಮಠದ ಶ್ರೀ ಪ್ರಭುದೇವರು ನೇತೃತ್ವ ವಹಿಸಿದ್ದರು.

ಬಣ್ಣದಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಪರಮೇಶ್ವರಯ್ಯ ಶಾಸ್ತ್ರಿ ಕಾನಳ್ಳಿಮಠ ವೇದ ಘೋಷ ಹಾಡಿದರು. ಶ್ರೀಗುರು ಸಿದ್ದೇಶ್ವರ ಮಹಿಳಾ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು.

ವೈದ್ಯೆ ಡಾ. ರಶ್ಮಿ ಹಿರೇಮಠ ನಿರೂಪಿಸಿದರು. ಆರತಿ ಹಿರೇಮಠ ವಂದಿಸಿದರು.