ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ

| Published : Nov 11 2025, 02:45 AM IST

ಸಾರಾಂಶ

ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನವನ್ನು ನ.19ರವರೆಗೆ ಹಮ್ಮಿಕೊಳ್ಳಲಾಗಿದೆ.

ಹೊಸಪೇಟೆ: ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನವನ್ನು ನ.19ರವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಅಧಿಕಾರಿಗಳು ಸಹಕರಿಸಬೇಕು ಎಂದು ವಿಜಯನಗರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಂಕರ ನಾಯ್ಕ ಹೇಳಿದರು.ನಗರದ ಡ್ಯಾಂ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹದಿನಾಲ್ಕು ದಿನಗಳ ಕಾಲ ಜರುಗುವ ಆಂದೋಲನದಲ್ಲಿ ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ಭೇಟಿ ಮಾಡಿ ಚರ್ಮ ಮತ್ತು ನರಗಳ ತಪಾಸಣೆ ನಡೆಸಲಾಗುತ್ತದೆ. ಕುಷ್ಟರೋಗ ದೃಢಪಟ್ಟ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಸಕಾಲಕ್ಕೆ ಚಿಕಿತ್ಸೆ ಪಡೆಯುವುದರಿಂದ ಅಂಗವೈಕಲ್ಯ ತಡೆಗಟ್ಟಬಹುದು ಎಂದರು.

ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾ ಕೆ. ಮಾತನಾಡಿ, ಕುಷ್ಟರೋಗ ಆಂದೋಲನದಲ್ಲಿ ಜಿಲ್ಲಾದ್ಯಂತ 624 ತಂಡಗಳನ್ನು ರಚಿಸಿಕೊಂಡು 1,74,695 ಮನೆಗಳನ್ನು 14 ದಿನಗಳಲ್ಲಿ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಒಂದು ತಂಡದಲ್ಲಿ ಇಬ್ಬರು ಸದಸ್ಯರಿದ್ದು, ಒಂದು ತಂಡ ಒಂದು ದಿನದಲ್ಲಿ 20 ಮನೆಗಳಿಗೆ ಭೇಟಿ ನೀಡಿ ಮನೆಯಲ್ಲಿನ ಪ್ರತಿಯೊಬ್ಬರ ತಪಾಸಣೆ ನಡೆಸಲಿದೆ. ಜಿಲ್ಲೆಯಲ್ಲಿ ಸದ್ಯ 76 ಕುಷ್ಟರೋಗ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ಸಮೀಕ್ಷೆಯಲ್ಲಿ ಹೆಚ್ಚಿನ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಉಂಟಾಗುವ ಅಂಗವೈಕಲ್ಯತೆ ತಡೆಗಟ್ಟಬಹುದಾಗಿರುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವಿನೋದ, ಜಿಲ್ಲಾ ಕುಷ್ಟರೋಗ ಸಲಹೆಗಾರ ಡಾ. ಕೊಟ್ರೇಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ, ಡಾ. ಮೌನೇಶ್ ಭಾಗವಹಿಸಿದ್ದರು.

4ಎಚ್ ಪಿಟಿ1

ಹೊಸಪೇಟೆಯ ಟಿಬಿ ಡ್ಯಾಂ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ ನೀಡಲಾಯಿತು.