ಸಾರಾಂಶ
ಪಶ್ಚಿಮ್ ಬಂಗಾ ಫಾರ್ಮಾಸಿಟಿಕಲ್ಸ್ ತಯಾರಿಸಿ ಸರಬರಾಜು ಮಾಡಿರುವ ರಿಂಗರ್ ಲ್ಯಾಕ್ಟೇಟ್ ಇನ್‌ಫ್ಯೂಷನ್ ಐಪಿ ಔಷಧಿ ಕೂಡಲೇ ಬಳಕೆ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಲ್ಲ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು : ಪಶ್ಚಿಮ್ ಬಂಗಾ ಫಾರ್ಮಾಸಿಟಿಕಲ್ಸ್ ತಯಾರಿಸಿ ಸರಬರಾಜು ಮಾಡಿರುವ ರಿಂಗರ್ ಲ್ಯಾಕ್ಟೇಟ್ ಇನ್‌ಫ್ಯೂಷನ್ ಐಪಿ ಔಷಧಿಯಿಂದ ಗಂಭೀರ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಬಳಕೆ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಲ್ಲ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಅಲ್ಲದೆ, ಇ-ಔಷಧ ತಂತ್ರಾಂಶದಲ್ಲಿ ಔಷಧವನ್ನು ಫ್ರೀಜ್ ಮಾಡಲಾಗಿದೆ.
500 ಎಂ.ಎಲ್. ಸಾಮರ್ಥ್ಯದ ಈ ಐಪಿ ಬಾಟಲ್‌ಗಳ ಬಳಕೆಯಿಂದ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬಂದಿವೆ. ದೇಹದಲ್ಲಿ ನೀರಿನ ಅಂಶ (ಉಪ್ಪು ಮತ್ತು ಎಲೆಕ್ಟ್ರೋಲೈಟ್) ಕಡಿಮೆಯಾದಾಗ ಸಲೈನ್ ಇಂಜೆಕ್ಷನ್ ಮೂಲಕ ರೋಗಿಗೆ ನೀಡಲಾಗುತ್ತದೆ. ಆದರೆ ಕೆಲ ಆಸ್ಪತ್ರೆಗಳಲ್ಲಿ ಪೂರೈಕೆಯಾಗಿರುವ ಸುಮಾರು 72 ಬ್ಯಾಚ್‌ಗಳ ಔಷಧಿಯಲ್ಲಿ ಲೋಪಗಳು ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ.
ಒಟ್ಟು 72 ಬ್ಯಾಚ್‌ಗಳಿಗೆ ಸಂಬಂಧಿಸಿದಂತೆ ಈ ಔಷಧವನ್ನು ಯಾವುದೇ ರೋಗಿಗೂ ಬಳಕೆ ಮಾಡಬಾರದು. ದಾಸ್ತಾನಿನಲ್ಲೂ ಇದನ್ನು ಪ್ರತ್ಯೇಕಗೊಳಿಸಿ ಜಿಲ್ಲಾ ಔಷಧ ಉಗ್ರಾಣಕ್ಕೆ ಹಿಂತಿರುಗಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳಿಗೆ ನಿಗಮದ ವ್ಯವಸ್ಥಾಪಕರು ಸೂಚಿಸಿದ್ದಾರೆ.