ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಒಳಮೀಸಲಾತಿಯಲ್ಲಿ ನಮಗೆ ನಿಗದಿಯಾಗಿರುವುದರಲ್ಲಿ ಒಂದು ಪರ್ಸೆಂಟ್ ಕಡಿಮೆಯಾದರೂ ಒಪ್ಪುವುದಿಲ್ಲ ಎಂದು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.ಕರ್ನಾಟಕ ರಾಜ್ಯ ಮಾದಿಗ ಪ್ರಾಧ್ಯಾಪಕರ ವೇದಿಕೆ ನಗರದಲ್ಲಿ ಆಯೋಜಿಸಿರುವ ಎರಡು ದಿನದ ‘ಒಳಮೀಸಲಾತಿ: ಚಿಂತನ ಮಂಥನ’ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇದೇ ವೇಳೆ ಮಾದಿಗ ಸಮುದಾಯಕ್ಕೆ ಈವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಉಪ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ. ಪ್ರಸ್ತುತ ಸಚಿವ ಸಂಪುಟದಲ್ಲಿಯೂ ಸಮಾಜದ ಪ್ರತಿನಿಧಿಗಳಿಗೆ ಸೂಕ್ತ ಖಾತೆ ಅಥವಾ ಪ್ರಭಾವಿ ಸ್ಥಾನಮಾನ ನೀಡಲಿಲ್ಲ. ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ತ್ಯಾಗ ಮತ್ತು ಸೇವೆಯನ್ನು ಗೌರವಿಸಿ ಅವರನ್ನು ಸಿಎಂ ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ಅಂಕಿ-ಅಂಶಗಳ ಪ್ರಕಾರ ನಮಗೆ ಏನು ನಿಗದಿಯಾಗಿದೆಯೋ ಅದರಲ್ಲಿ ಒಂದು ಪರ್ಸೆಂಟ್ ಕಡಿಮೆಯಾದರೂ, ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದರು.ಎಲ್ಲಿಯವರೆಗೂ ಗಟ್ಟಿಯಾಗಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಸರ್ಕಾರಗಳೂ ನಮಗೆ ಪ್ರಾತಿನಿಧ್ಯ ಕೊಡುವುದಿಲ್ಲ. ಈಗಾಗಲೇ ಸಾಕಷ್ಟು ಕಾಲಹರಣವಾಗಿದೆ. ಅಂದು ದತ್ತಾಂಶಗಳ ಬಗ್ಗೆ ಮಾತನಾಡದವರು ಇಂದು ದತ್ತಾಂಶ ಕುರಿತು ಮಾತನಾಡುತ್ತಿದ್ದಾರೆ. ಇದು ಮತ್ತೊಂದು ಕಾಲಹರಣದ ಕ್ರಮ ಆಗಬಾರದು. ನ್ಯಾ.ಸದಾಶಿವ ಆಯೋಗದ ವರದಿ, ಜೆ.ಸಿ.ಮಾಧುಸ್ವಾಮಿ ಅವರು ನೀಡಿದ ತಾಂತ್ರಿಕ ವರದಿ ಇದೆ. ಇವುಗಳನ್ನು ಬಿಟ್ಟು ಮತ್ತೊಂದು ಏನೋ ಮಾಡಲು ಹೋದರೆ, ಅದು ನಮ್ಮ ಸಮಾಜಕ್ಕೆ ಮಾಡುವ ಅತಿ ದೊಡ್ಡ ಅನ್ಯಾಯ, ಅದೂ ನಿಮ್ಮಿಂದಲೇ ಆಯಿತು ಎಂಬ ಆರೋಪವನ್ನು ಹೊತ್ತುಕೊಳ್ಳಬೇಡಿ ಎಂದು ಎಚ್ಚರಿಸಿದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ನಮಗೆ ಬೇಕಿರುವುದು ಜನಸಂಖ್ಯೆ ಆಧಾರಿತ ಮೀಸಲಾತಿ ಅಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯದೆ ಅಥವಾ ಪಡೆದೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಲವು ಸಮುದಾಯಗಳು ಹಿಂದುಳಿದಿವೆ. ಅದನ್ನು ಆಧರಿಸಿ ನಮಗೆ ಮೀಸಲಾತಿ ಕಲ್ಪಿಸಬೇಕು. ನಮಗೆ ಯಾಕೆ ಒಳಮೀಸಲಾತಿಯ ಅವಶ್ಯಕತೆ ಇದೆ ಎಂಬ ವಿವರವಾದ ಮನವಿಯನ್ನು ನಾಗಮೋಹನದಾಸ್ ಆಯೋಗಕ್ಕೆ ನೀಡಬೇಕಿದೆ ಎಂದರು.ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಒಳಮೀಸಲಾತಿ ಜಾರಿ ಬಗ್ಗೆ ಯಾವುದೇ ಅನುಮಾನ ಬೇಡ, ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ. ನಾವು ಯಾವುದೇ ಪ್ರಚೋದನೆಯ ದಾಳ ಆಗುವುದು ಬೇಡ. 40 ಸಾವಿರದಷ್ಟು ಮಾದಿಗರ ಮತಗಳನ್ನು ಪಡೆದು ಗೆದ್ದು ಬಂದು ಈಗ ಸಚಿವರಾದವರೇ ಆ ಸಮುದಾಯದ ಒಳಮೀಸಲಾತಿ ವಿಚಾರ ಬಂದಾಗ ಸಚಿವ ಸಂಪುಟದಲ್ಲಿ ಚಕಾರ ಎತ್ತಲಿಲ್ಲ. ಸಂಪುಟದ ಉಪಸಮಿತಿ ರಚಿಸಲು ಮುಖ್ಯಮಂತ್ರಿ ಮುಂದಾದಾಗ, ಪರಿಶಿಷ್ಟ ಜಾತಿಯ ಸಚಿವರುಗಳೇ ದೂರ ಉಳಿದರು. ಹಾಗಾಗಿ ಮುಖ್ಯಮಂತ್ರಿಗಳು ನಾಗಮೋಹನದಾಸ್ ನೇತೃತ್ವದ ಆಯೋಗ ರಚನೆ ಮಾಡಬೇಕಾಯಿತು ಎಂದು ಹೇಳಿದರು.
ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, ಪ್ರಸ್ತುತ ಸರ್ಕಾರದಲ್ಲಿ ನಮ್ಮ ‘ಬ್ರದರ್’ಗಳಿಗೆ (ಎಸ್ಸಿ ಬಲ) ಗೃಹ ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ನಮ್ಮವರಿಗೆ ಯಾವುದೇ ಉಪಯೋಗ ಇಲ್ಲದ ಖಾತೆಗಳನ್ನು ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹೊಸಪೇಟೆಯ ಪೂರ್ಣಾನಂದ ಭಾರತಿ ಸ್ವಾಮೀಜಿ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ವೇದಿಕೆ ಪ್ರಧಾನ ಪೋಷಕ ಭೀಮಾಶಂಕರ ಮತ್ತಿತರರು ಇದ್ದರು.