ಸಾರಾಂಶ
- ಸಭೆ ಮುಂದೂಡಿದ ಡಿಸಿ ನಡೆಗೆ ರೈತರು ಕಿಡಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭತ್ತವನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸದಂತೆ ಆದೇಶ ಹೊರಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣವು ಸಭೆ ಬಹಿಷ್ಕರಿಸಿ, ಜಿಲ್ಲಾದ್ಯಂತ ಮೇ 17ರಂದು ಜಿಲ್ಲಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಿದೆ.ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜೊತೆಗೆ ಶುಕ್ರವಾರ ಮಧ್ಯಾಹ್ನ ರೈತರ ಸಭೆ ನಿಗದಿಯಾಗಿತ್ತು. ಆದರೆ, ಜಿಲ್ಲಾಧಿಕಾರಿ ಸೋಮವಾರ ಅಥವಾ ಮಂಗಳವಾರ ಸಭೆ ಮಾಡೋಣ. ಸಭೆಯಲ್ಲಿ ನಿಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು. ಆದರೆ, ಅದಕ್ಕೊಪ್ಪದ ರೈತರು ಮುಖ್ಯಮಂತ್ರಿ ಅಥವಾ ಕೃಷಿ ಸಚಿವರ ನೇತೃತ್ವದಲ್ಲಿ ಸಭೆ ಕರೆದು, ರೈತರ ಸಮಸ್ಯೆ ಪರಿಹರಿಸುವಂತೆ ಎಂದು ಪಟ್ಟುಹಿಡಿದರು.
ಅದಕ್ಕೆ ಆಕ್ಷೇಪಿಸಿದ ರೈತರು, ಅಷ್ಟೊತ್ತಿಗಾಗಲೇ ಶೇ.50ರಷ್ಟು ಭತ್ತ ಖಾಲಿ ಆಗಿರುತ್ತದೆ. ಹಾಗಾಗಿ, ಇಂದೇ ಕೃಷಿ ಸಚಿವರ ಬಳಿ ಮಾತನಾಡಿ, ನಾಳೆಯೇ ಸಭೆ ನಿಗದಿಪಡಿಸಬೇಕು. ಸಿಎಂ ಜೊತೆಗೆ ಮಾತನಾಡಿ ಸಹಾಯಧನ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದರು. ಆದರೆ, ಜಿಲ್ಲಾಡಳಿತ ಸೋಮವಾರ ಅಥವಾ ಮಂಗಳವಾರ ಸಭೆ ಮಾಡಿ, ನಂತರ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರೂ, ರೈತರು ಒಪ್ಪದೇ ಸಭೆ ಬಹಿಷ್ಕರಿಸಿ ಸಭಾಂಗಣದಿಂದ ಹೊರನಡೆದರು.ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಅವರು, ಸರ್ಕಾರಕ್ಕೆ ರೈತರ ಹಿತಾಸಕ್ತಿಗಿಂತ ಖರೀದಾರರ ಹಿತಾಸಕ್ತಿಯೇ ಮುಖ್ಯವಾಗಿದೆ. ನಮ್ಮ ಬೇಡಿಕೆ ವಿಚಾರದ ಬಗ್ಗೆ ಆದೇಶ ಹೊರಡಿಸಲು ಮೀನಾ ಮೇಷ ಎಣಿಸುತ್ತಿದೆ. 2-3 ದಿನ ತಡವಾದರೂ ರೈತರು ಶೇ.50ರಷ್ಟು ಭತ್ತ ಮಾರಾಟ ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಸಭೆ ಕರೆದು, ಸ್ಪಷ್ಪ ಆದೇಶ ಹೊರಡಿಸಬೇಕೆಂಬುದು ಸಂಘದ ಬೇಡಿಕೆ. ಆದರೆ, ಜಿಲ್ಲಾಡಳಿತ ಸ್ಪಂದಿಸದ ಹಿನ್ನೆಲೆ ಅನಿವಾರ್ಯವಾಗಿ ಜಿಲ್ಲಾದ್ಯಂತ 17ರಂದು ಎಲ್ಲ ರೈತರು ತಮ್ಮ ತಮ್ಮ ಊರು, ಗ್ರಾಮಗಳಲ್ಲಿಯೇ ರಸ್ತೆ ತಡೆ ಮಾಡಿ, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹಧನಕ್ಕೆ ಒತ್ತಾಯಿಸಲಿದ್ದಾರೆ. ಭತ್ತ ಬೆಳೆಗಾರರು ಸ್ವಯಂ ಇಚ್ಛೆಯಿಂದ ಚಳವಳಿ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ಸಂಘದ ಮುಖಂಡರಾದ ಯಲೋದಹಳ್ಳಿ ರವಿಕುಮಾರ, ಚಿನ್ನಸಮುದ್ರ ಭೀಮಣ್ಣ, ಆನಗೋಡು ಭೀಮಣ್ಣ, ಗಂಡುಗಲಿ, ಹರಿಹರದ ಗರಡಿ ಮನೆ ಬಸವರಾಜ, ಯರವನಾಗತಿಹಳ್ಳಿ ರುದ್ರಪ್ಪ ಇನ್ನಿತರರು ಇದ್ದರು.- - -
-16ಕೆಡಿವಿಜಿ:ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ನೇತೃತ್ವ ಸಭೆಯಲ್ಲಿ ರೈತರು ಸಮಸ್ಯೆ ಹೇಳಿಕೊಂಡರು.