ವಿಜಯನಗರದ ನೆಲದಿಂದ ಸರ್ಕಾರದ ಜೋಡೆತ್ತು ಸಂದೇಶ ಸಾರಿದ ಸಿಎಂ, ಡಿಸಿಎಂ!

| N/A | Published : May 17 2025, 01:33 AM IST / Updated: May 17 2025, 01:29 PM IST

DK Shivakumar  Siddaramaiah
ವಿಜಯನಗರದ ನೆಲದಿಂದ ಸರ್ಕಾರದ ಜೋಡೆತ್ತು ಸಂದೇಶ ಸಾರಿದ ಸಿಎಂ, ಡಿಸಿಎಂ!
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶದ ಭವ್ಯ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಜೊತೆಗೂಡಿಯೇ ವೇದಿಕೆ ನಿರ್ಮಾಣದ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆದರು.

ಕೃಷ್ಣ ಲಮಾಣಿ

ಹೊಸಪೇಟೆ: ರಾಜ್ಯ ಸರ್ಕಾರದ ಎರಡನೇ ವರ್ಷದ ಸಂಭ್ರಮ ಆಚರಣೆಗೆ ವಿಜಯನಗರದ ನೆಲವನ್ನು ಕಾಂಗ್ರೆಸ್‌ ಆಯ್ಕೆ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಉತ್ಸಾಹ ಹಾಗೂ ಒಗ್ಗಟ್ಟಿನಿಂದಲೇ ಜತೆಗೂಡಿಯೇ ಹೊಸಪೇಟೆಯಲ್ಲಿ ಓಡಾಡಿದರು. ಈ ಮೂಲಕ ನಾವಿಬ್ಬರೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜೋಡೆತ್ತು ಎಂಬ ಸಂದೇಶ ರವಾನಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶದ ಭವ್ಯ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಜೊತೆಗೂಡಿಯೇ ವೇದಿಕೆ ನಿರ್ಮಾಣದ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆದರು. ಇದು ಸರ್ಕಾರಿ ಕಾರ್ಯಕ್ರಮ ಆಗಿರುವ ಹಿನ್ನೆಲೆಯಲ್ಲಿ 2ರಿಂದ 3 ಲಕ್ಷ ಜನ ಸೇರಿಸಲು ಪಕ್ಷದ ಸಾಥ್‌ ಕೂಡ ಬಹುಮುಖ್ಯ ಎಂಬುದನ್ನು ಇಬ್ಬರೂ ಪ್ರತಿಪಾದಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲೂ ಸಿಎಂ ಹಾಗೂ ಡಿಸಿಎಂ ಒಗ್ಗಟ್ಟು ಪ್ರದರ್ಶಿಸಿದರು. ಮೊದಲು ಆಗಮಿಸಿದ್ದ ಶಿವಕುಮಾರ ಅವರು ಸಿದ್ದರಾಮಯ್ಯ ಬರುವಿಕೆಗಾಗಿ ಕಾದರು.

2023ರ ಚುನಾವಣೆಯಲ್ಲಿ ಬಲ : ಕಲ್ಯಾಣ ಕರ್ನಾಟಕದ ನೆಲ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲೇ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಎಂಟು ಶಾಸಕರು ಕಾಂಗ್ರೆಸ್‌ನವರಿದ್ದಾರೆ. ಸಂಸದರು ಕೂಡ ಕಾಂಗ್ರೆಸ್‌ನವರಿದ್ದಾರೆ. ಅದರಲ್ಲೂ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಗದಗ, ದಾವಣಗೆರೆ ಮತ್ತು ಹಾವೇರಿಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದಲ್ಲಿದೆ. ಈ ಕಾರಣಕ್ಕಾಗಿಯೇ ಹೊಸಪೇಟೆಯನ್ನು ಆಯ್ಕೆ ಮಾಡಿಕೊಂಡು, ವಿಜಯನಗರದ ನೆಲದಿಂದಲೇ ಜಿಪಂ, ತಾಪಂ ಚುನಾವಣೆಗೂ ರಾಜ್ಯದ ಜನತೆಗೆ ಸಂದೇಶ ನೀಡುವುದರೊಂದಿಗೆ, ಬಿಜೆಪಿ ಹಾಗೂ ಜೆಡಿಎಸ್‌ಗೆ ಕಾಂಗ್ರೆಸ್‌ನಲ್ಲಿ ಒಡಕ್ಕಿಲ್ಲ ಎಂಬ ಸಂದೇಶವನ್ನೂ ರವಾನಿಸುವ ಸಂಕಲ್ಪವನ್ನು ಕಾಂಗ್ರೆಸ್‌ ತೊಟ್ಟಿದೆ.

ಮೇ 20 ರಂದು ನಡೆಯುವ ಸಮಾವೇಶ ರಾಜ್ಯ ಕಾಂಗ್ರೆಸ್‌ ಸರ್ಕಾರದ ಒಗ್ಗಟ್ಟು ಪ್ರದರ್ಶಿಸಲು ವೇದಿಕೆ ಮಾಡಿಕೊಳ್ಳಲು ಇಬ್ಬರೂ ನಾಯಕರು ಯೋಜಿಸಿದ್ದು, ಇದಕ್ಕಾಗಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಣದೀಪ್‌ ಸುರ್ಜೇವಾಲಾ, ವೇಣುಗೋಪಾಲ್‌ ಅವರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಮೂಲಕ ಹೈಕಮಾಂಡ್‌ಗೂ ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕಿಲ್ಲ ಎಂಬುದನ್ನು ತೋರ್ಪಡಿಸಲು ವಿಜಯನಗರದ ನೆಲವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ರಾಜ್ಯದ ಜನತೆ ನಮಗೆ ವಿಧಾನಸಭೆ ಚುನಾವಣೆಯಲ್ಲಿ ಬಹುಮತದ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ಹೊಸಪೇಟೆಯಲ್ಲಿ ಮೇ 20ರಂದು ಸಮರ್ಪಣೆ ಸಂಕಲ್ಪ ಸಮಾವೇಶದ ಮೂಲಕ ಒಂದು ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸುತ್ತಿದ್ದೇವೆ. ಸರ್ಕಾರದ ಪಂಚ ಗ್ಯಾರಂಟಿ ಜತೆಗೆ ಇತರ ಯೋಜನೆಗಳ ಬಗ್ಗೆಯೂ ಸಮಾವೇಶದಲ್ಲಿ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮಹಾ ಜನತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ 2023ರಲ್ಲಿ ಭಾರೀ ಬಹುಮತ ನೀಡಿ ದೊಡ್ಡ ಸಂದೇಶ ನೀಡಿದ್ದಾರೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಹಾಗಾಗಿ ಈ ಭಾಗದಲ್ಲಿ ಸರ್ಕಾರದ ಎರಡು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಮೇ 20ರಂದು ಸಮರ್ಪಣೆ ಸಂಕಲ್ಪ ಸಮಾವೇಶ ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

Read more Articles on