ಬಣ್ಣದ ಮಣ್ಣಿನ ದೀಪದಲ್ಲಿ ಮೂಡಿದ ಡಿ.ಕೆ.ಶಿವಕುಮಾರ್‌

| Published : May 16 2025, 02:04 AM IST

ಸಾರಾಂಶ

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ 63ನೇ ವರ್ಷದ ಜನ್ಮದಿನ ಪ್ರಯುಕ್ತ ಬರೋಬ್ಬರಿ 63 ಸಾವಿರ ಬಣ್ಣ ಬಣ್ಣದ ಮಣ್ಣಿನ ದೀಪ ಬಳಸಿ ಡಿಕೆಶಿ ಭಾವಚಿತ್ರ ಮೂಡುವಂತೆ ಅರಮನೆ ಮೈದಾನದಲ್ಲಿ ಕಲಾಕೃತಿ ರಚನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ 63ನೇ ವರ್ಷದ ಜನ್ಮದಿನ ಪ್ರಯುಕ್ತ ಬರೋಬ್ಬರಿ 63 ಸಾವಿರ ಬಣ್ಣ ಬಣ್ಣದ ಮಣ್ಣಿನ ದೀಪ ಬಳಸಿ ಡಿಕೆಶಿ ಭಾವಚಿತ್ರ ಮೂಡುವಂತೆ ಅರಮನೆ ಮೈದಾನದಲ್ಲಿ ಕಲಾಕೃತಿ ರಚನೆ ಮಾಡಲಾಗಿದೆ.

ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಭರತ್‌ರಾಮ್‌ಗೌಡ ಅವರು ಕಲಾವಿದರ ನೆರವಿನಿಂದ ವಿಶಿಷ್ಟ ಕಲೆ ಮೂಲಕ ತಮ್ಮ ನಾಯಕನ ಭಾವಚಿತ್ರ ಮೂಡಿ ಬರುವಂತೆ ಮಾಡಿದ್ದಾರೆ.

ಈ ಕಲಾಕೃತಿ ರಚನೆಗೆ 63,000 ಕೈಯಿಂದ ಪೇಂಟ್‌ ಮಾಡಿದ (ಚಿತ್ರಿಸಿದ) ಮಣ್ಣಿನ ದೀಪಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಮಣ್ಣಿನ ದೀಪಗಳಿಗೆ ಒಂದೊಂದು ದೀಪಕ್ಕೆ ಒಂದೊಂದು ಬಣ್ಣ ಬಳಿಯಲಾಗಿದೆ. ಬಿಳಿ, ನೀಲಿ, ಹಸಿರು, ಕಪ್ಪು, ಹಳದಿ ಹೀಗೆ ವಿವಿಧ ಬಣ್ಣಗಳನ್ನು ದೀಪಗಳಿಗೆ ಬಳಿದಿದ್ದು, ವೈಮಾನಿಕ ನೋಟದಿಂದ ನೋಡಿದರೆ ಬಣ್ಣ ಬಣ್ಣದ ಚುಕ್ಕಿಗಳ ರೂಪದಲ್ಲಿ ಕಾಣುವ ದೀಪಗಳು ಒಟ್ಟಾರೆಯಾಗಿ ಶಿವಕುಮಾರ್‌ ಅವರ ನೈಜ ಭಾವಚಿತ್ರ ನೋಡಿದಂತೆ ಭಾಸವಾಗುತ್ತವೆ.

ಮಣ್ಣಿನ ದೀಪಗಳಲ್ಲಿ ಮೂಡಿರುವ ಡಿ.ಕೆ.ಶಿವಕುಮಾರ್‌ ಅವರ ಭಾವಚಿತ್ರವನ್ನು ವೈಮಾನಿಕ ನೋಟದಿಂದ ಮಾತ್ರ ಕಣ್ತಿಂಬಿಕೊಳ್ಳಬಹುದು. ಡ್ರೋನ್‌ ಅಥವಾ ಏರಿಯಲ್‌ ವ್ಯೂದಿಂದ (ವೈಮಾನಿಕ ನೋಟ) ಕಾಣುವ ಈ ದೃಶ್ಯ ಗಮನ ಸೆಳೆಯುತ್ತಿದೆ.

100 ಮಂದಿ ಶ್ರಮದ ಬಘೀರ ಕಲೆ:

ಬೆಂಗಳೂರು ಅರಮನೆ ಮೈದಾನದಲ್ಲಿ 3,500 ಚದರಡಿ ವಿಸ್ತೀರ್ಣದಲ್ಲಿ ಮುಂಬೈ ಮೂಲದ ಕಲಾವಿದ ಚೇತನ್‌ ಲಾಲ್ ಈ ಕಲಾಕೃತಿ ರಚಿಸಿದ್ದು, 100 ಮಂದಿ ಸಹಾಯಕರು 100 ದಿನ ಪರಿಶ್ರಮಪಟ್ಟಿದ್ದಾರೆ. ಈ ಫೋಟೋ ಹಾಗೂ ಡ್ರೋನ್‌ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.