ಸಾರಾಂಶ
- ಹರಿಹರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ । ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಪೂರ್ವಭಾವಿ ಸಭೆ
- - -ಕನ್ನಡಪ್ರಭ ವಾರ್ತೆ ಹರಿಹರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ನಗರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಬಿಜೆಪಿಯವರು, ಗ್ಯಾರಂಟಿಗಳಿಗೆ ಬಹುಕಾಲ ಹಣ ಹೊಂದಿಸಲಾಗಲ್ಲ, ಮೂರ್ನಾಲ್ಕು ತಿಂಗಳಲ್ಲಿ ಸರ್ಕಾರ ಬೀಳುತ್ತೆ, ಈ ಯೋಜನೆ ಜನರನ್ನು ಸೋಮಾರಿ ಆಗಿಸುತ್ತದೆ ಎಂದು ವಿರೋಧಿಸಿದರು ಎಂದರು. ಕಾಂಗ್ರೆಸ್‍ನ ಗ್ಯಾರಂಟಿಗಳನ್ನು ವಿರೋಧಿಸಿದ, ಗೇಲಿ ಮಾಡಿದ ಬಿಜೆಪಿಯವರೆ, ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ. ಭಾರತ ವಿಶ್ವಗುರು ಆಗಲು ಈ ಹಿಂದೆ ನಮ್ಮ ಕಾಂಗ್ರೆಸ್ ಮಾಡಿದ ಅನೇಕ ಯೋಜನೆಗಳು ಕಾರಣ. ಪ್ರಸ್ತುತ ಕೇಂದ್ರ ಸರ್ಕಾರ ಅವುಗಳನ್ನು ಕಾಪಿ ಮಾಡಿ ಇತರೆ ಹೆಸರಿನಲ್ಲಿ ಪ್ರಸ್ತುತಪಡಿಸುತ್ತಿದೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಜನಪರ ಆಡಳಿತ ನೀಡಲಾಗುತ್ತಿದೆ. ರಾಜ್ಯದ ಖಜಾನೆಯ ಹಣ ರಾಜ್ಯದ ಅರ್ಹ ಬಡ ವರ್ಗದವರಿಗೆ ಹಂಚಿಕೆ ಮಾಡುತ್ತಾ ಕಾಂಗ್ರೆಸ್ ಸಾಮಾಜಿಕ ನ್ಯಾಯ ನೀಡುತ್ತಿದೆ. ಧೃತಿಗೆಡದೇ ಕಾಂಗ್ರೆಸ್ ಸರ್ಕಾರ ಈ ಅವಧಿ ಪೂರ್ಣಗೊಳಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಆಶಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ವಿಜಯ್‍ಕುಮಾರ್ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯ ವಿವಿಧ ಅಂಗಗಳನ್ನು ಅಸಾಂವಿಧಾನಾತ್ಮಕವಾಗಿ ಹಿಡಿತಕ್ಕೆ ಪಡೆದಿರುವ ಬಿಜೆಪಿ ಈಗ ನ್ಯಾಯಾಂಗಕ್ಕೂ ಕೈ ಹಾಕಿದೆ. ರಾಷ್ಟ್ರಪತಿ ಮೂಲಕ 14 ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‍ಗೆ ಕೇಳಿಸಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ರೈತರು ಜಮೀನಿನ ಫೋಡು, ಹದ್ದುಬಸ್ತು ಮಾಡಿಸಲು ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಒಂದು ತಿಂಗಳಲ್ಲಿ ಈ ಕೆಲಸಗಳು ಆಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಮಾಜಿ ಶಾಸಕ ಎಸ್.ರಾಮಪ್ಪ, ಪಕ್ಷದ ಮುಖಂಡರಾದ ಎಲ್.ಬಿ. ಹನುಮಂತಪ್ಪ, ಎಂ.ಬಿ. ಅಬಿದ್ ಅಲಿ, ಟಿ.ಜೆ. ಮುರುಗೇಶಪ್ಪ, ಬಿ.ರೇವಣಸಿದ್ದಪ್ಪ, ಹಾಲೇಶ್ ಗೌಡ, ಎಚ್.ಎಚ್.ಬಸವರಾಜ್, ನಿಖಿಲ್ ಕೊಂಡಜ್ಜಿ, ಡಿ.ಜಿ.ಶಿವಾನಂದಪ್ಪ, ಹಬೀಬ್ ಉಲ್ಲಾ ಬೇಗ್, ಜಿ.ವಿ.ಪ್ರವೀಣ್, ಗುತ್ಯಪ್ಪ ಜೋಗಪ್ಪ, ಸುಭಾಷ್‍ಚಂದ್ರ ಭೋಸ್, ಅನಿತಾ, ಇಮ್ತಿಯಾಜ್ ಹಾಗೂ ಇತರರಿದ್ದರು.
- - -(ಬಾಕ್ಸ್) * ಗ್ರೇಟರ್‍ಗೂ ಕ್ವಾರ್ಟರ್‍ಗೂ ವ್ಯತ್ಯಾಸ ಗೊತ್ತಿಲ್ಲದಷ್ಟು ಬುದ್ಧಿವಂತ ಅಶೋಕಣ್ಣ
ಹರಿಹರ: ಗ್ರೇಟರ್ ಎಂಬ ಪದವನ್ನು ಕ್ವಾರ್ಟರ್ ಎಂದು ಹೇಳಿರುವ ಅಶೋಕಣ್ಣನಿಗೆ ಗ್ರೇಟರ್‍ಗೂ ಕ್ವಾರ್ಟರ್‍ಗೂ ವ್ಯತ್ಯಾಸ ಗೊತ್ತಿಲ್ಲವೇ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರನ್ನು ಕ್ವಾರ್ಟರ್ ಬೆಂಗಳೂರು ಎಂದು ಕರೆದಿರುವ ಅಶೋಕ ಅವರ ಬುದ್ಧಿಗೆ ಏನು ಹೇಳೋದು. ಕಾಮಾಲೆ ಕಣ್ಣೋರಿಕೆ ಕಾಣೋದೆಲ್ಲ ಹಳದಿ ಅನ್ನೋ ರೀತಿ ಅಶೋಕಣ್ಣನ ಮನಸ್ಥಿತಿಯೂ ಇದೆ. ಗ್ರೇಟರ್ ಬೆಂಗಳೂರು ಕಾಯ್ದೆ ವಿರೋಧಿಸುವ ಬಿಜೆಪಿ ಅವರಿಗೆ ಮಾಡಲು ಕೆಲಸ ಇಲ್ಲ ಎಂದರು.
ಜನವರಿ ತಿಂಗಳವರೆಗಿನ ಗೃಹಲಕ್ಷ್ಮಿ ಹಣ ಜಮೆ ಮಾಡಿದ್ದು, ಹೊಸ ಆರ್ಥಿಕ ವರ್ಷ ಬರುತ್ತಿರುವ ಹಿನ್ನೆಲೆ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ಹಣಕ್ಕೆ ಬಜೆಟ್ ಹೊಂದಿಸಬೇಕಾಗಿದೆ. ಗ್ಯಾರಂಟಿ ಬಗ್ಗೆ ಬಿಜೆಪಿ ಅನಗತ್ಯವಾಗಿ ಟೀಕೆ ಮಾಡುತ್ತಿದೆ. ದೆಹಲಿ ಸೇರಿದಂತೆ ಅವರು ಘೋಷಣೆ ಮಾಡಿರುವ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಕೊಳ್ಳಲಿ. ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿರುವುದು ಒಳ್ಳೆಯದು, ಮಾಡಲಿ. ದೇಶದ ಭದ್ರತೆ ವಿಷಯವನ್ನು ರಾಜಕೀಯಗೊಳಿಸಬಾರದು. ಆಪರೇಷನ್ ಸಿಂದೂರ ಬಗ್ಗೆ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಖಂಡನೀಯ. ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವ ಕುನ್ವರ್ ಶಾ ಅವರಂಥ ರೋಗಗ್ರಸ್ಥ ಮನಸ್ಥಿತಿ ಇರುವವರನ್ನು ಜನತೆ ಧಿಕ್ಕರಿಸಬೇಕು ಎಂದರು. ಬೆಳಗಾವಿ ಜಿಲ್ಲೆಯಲ್ಲಿ ವಿಕೃತ ಮನೋಭಾವದವರು ಕುರ್‌ಆನ್ ಗ್ರಂಥ ಸುಟ್ಟಿದ್ದಾರೆ. ತಪ್ಪು ಮಾಡಿದವರನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುತ್ತೇವೆ ಎಂದರು.- - -
-16ಎಚ್‍ಆರ್‍ಆರ್ 02, 16 ಎಚ್‌ಆರ್‌ಆರ್ 02ಎ:ಹರಿಹರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು.